

ಮಂಡ್ಯ: ಭಾರತ ಗೋ ತಳಿಗಳ ಬಗ್ಗೆ ಪ್ರಚಾರ ನೀಡುವ ಸಲುವಾಗಿ ರಾಜ್ಯದಲ್ಲಿ ನಂದಿ ರಥಯಾತ್ರೆ ನಡೆಯುತ್ತಿದೆ. ಅದರಂತೆ ಮಾ.3 ರಿಂದ 5ರವರೆಗೆ ಜಿಲ್ಲೆಯಲ್ಲಿ ಯಾತ್ರೆ ಸಂಚರಿಸಲಿದೆ. ಇದರ ಅಂಗವಾಗಿ ಜ.12ರಂದು ಸಂಜೆ 4ಕ್ಕೆ ನಾಗಮಂಗಲ ತಾಲೂಕು ಬಿಂಡಿಗನವಿಲೆ ಗ್ರಾಮದಲ್ಲಿ ನಂದಿಗಳ ಭವ್ಯ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಲಕ್ಷ್ಮೀ ಗೋಮಾತಾ ಮಂದಿರದ ಸಂಸ್ಥಾಪಕ ಹಾಗೂ ನಾಗಮಂಗಲ ಗೋ ಸೇವಾ ಪ್ರಮುಖ್ ಶಶಿಕುಮಾರ್ ತಿಳಿಸಿದರು.
ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಆಶ್ರಯದಲ್ಲಿ ಗೋ ಸೇವಾ ಗತಿವಿಧಿಯ ಸಹಕಾರದಿಂದ ಶ್ರೀ ಲಕ್ಷ್ಮೀ ಗೋಮಾತಾ ಮಂದಿರ ಪಂಚಗವ್ಯ ಉತ್ಪನ್ನ ಕೇಂದ್ರದ ನೇತೃತ್ವದಲ್ಲಿ ನಂದಿಯಾತ್ರೆ ನಡೆಯುತ್ತಿದೆ. ಗೃಹ ಬಳಕೆಯ ಗವ್ಯೊತ್ಪನ್ನಗಳ ತಯಾರಿಕೆಯ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ದೇಸಿ ಗೋ ತಳಿಗಳನ್ನು ಉಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜ.12ರಂದು ಬಿಂಡಿಗನವಿಲೆ ಗ್ರಾಮದಲ್ಲಿ ನಂದಿಗಳ ಭವ್ಯ ಮೆರವಣಿಗೆ ಜತೆಗೆ ವಿಷ್ಣು ಸಹಸ್ರನಾಮ ಪಟಣ ಮತ್ತು ಅಗ್ನಿಹೋತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಲೆನಾಡು ಗಿಡ್ಡ ಗವ್ಯೋತ್ಪನ್ನ ಸಹಕಾರ ಸಂಘವನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು.
ಗೋ ಸಂರಕ್ಷಣಾ ಸಮಿತಿಯ ರಾಜ್ಯ ಸಂಚಾಲಕ ಮಳವಳ್ಳಿ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರ, ಪಶು ಇಲಾಖೆ, ಸಂಘ ಸಂಸ್ಥೆಗಳು ಪ್ರಾಂತೀಯ ತಳಿಗಳ ಬಗ್ಗೆ ಆಸಕ್ತಿ ತೋರದೇ ಕ್ಷೀರ ಕ್ರಾಂತಿಯ ಬದಲಿಗೆ ರೋಗ ಕ್ರಾಂತಿ ಪ್ರಾರಂಭವಾಗಿದೆ. ಸದರಿ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ದೇಸಿ ಹಾಗೂ ಪ್ರಾಂತೀಯ ತಳಿಗಳ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಸೇರಿಸುವಂತೆ ಒತ್ತಾಯಿಸಿದರು.
ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಇದ್ದರು.