

ಮಂಡ್ಯ: ಎಂಬತ್ತೇಳನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ಮೂರು ತಿಂಗಳಾದರೂ ಅದರ ಖರ್ಚು ವೆಚ್ಚದ ಲೆಕ್ಕ ನೀಡಿಲ್ಲ. ಕೂಡಲೇ ಲೆಕ್ಕಪತ್ರವನ್ನು ಸಾರ್ವತ್ರಿಕವಾಗಿ ಬಹಿರಂಗಪಡಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದರು.
ಸಮ್ಮೇಳನದ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಜನತೆಯ ಮುಂದಿಡುವುದು ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಜವಾಬ್ದಾರಿಯಾಗಿದೆ. ಸಮ್ಮೇಳನಕ್ಕೆ ಸರ್ಕಾರದಿಂದಲೇ ಕೋಟ್ಯಂತರ ರೂ ನೀಡಲಾಗಿದೆ. ಸಮಿತಿಯನ್ನು ರಚಿಸಿ ಹಣ ಹಂಚಲಾಗಿದ್ದು, ಗಣಕೀಕೃತ ಸಹಾಯವಿರುವ ಕಾಲದಲ್ಲಿ ಲೆಕ್ಕಪತ್ರ ನೀಡಲು ಮೂರು ತಿಂಗಳು ಬೇಕೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸಮ್ಮೇಳನದ ಪೂರ್ವದಲ್ಲಿಯೇ ಸೋಷಿಯಲ್ ಆಡಿಟಿಂಗ್ ಮಾಡಲು ಕೋರಿ ಜಿಲ್ಲಾಧಿಕಾರಿಗೆ ಮನವಿ ಮಾಡಲಾಯಿತು. ಸಮ್ಮೇಳನದ ತಿಂಗಳ ನಂತರ ಲೆಕ್ಕಪತ್ರ ಬಹಿರಂಗ ಪಡಿಸಲು ಕೋರಲಾಯಿತು. ಆಗ ಒಂದು ತಿಂಗಳ ಕಾಲಾವಕಾಶ ಕೇಳಿದ ಜಿಲ್ಲಾಧಿಕಾರಿ 45 ದಿನ ಕಳೆದರೂ ಸಮ್ಮೇಳನದ ಲೆಕ್ಕಪತ್ರಗಳನ್ನು ಜನರ ಮುಂದಿರಿಸಿಲ್ಲ. ಒಂದು ವಾರದೊಳಗೆ ಲೆಕ್ಕವನ್ನು ಸಾರ್ವಜನಿಕರ ಮುಂದಿಡದಿದ್ದರೆ ರಾಜ್ಯಾದ್ಯಂತ ಲೆಕ್ಕ ಕೊಡಿ ಚಳವಳಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ, ಜಿ.ಸಂತೋಷ್, ರಾಜೇಂದ್ರಬಾಬು, ಅರವಿಂದಪ್ರಭು, ಎಚ್.ಡಿ.ಜಯರಾಂ, ಸಿ.ಕುಮಾರಿ ಇದ್ದರು.