

ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆ 2.40 ಲಕ್ಷ ಟನ್ ಕಬ್ಬು ಅರೆದಿದ್ದು, ಶೇ.8.5ರಷ್ಟು ಇಳುವರಿ ಬರುತ್ತಿತ್ತು. ಆದರೀಗ ಕಬ್ಬಿನ ಕೊರತೆ ಆರಂಭವಾದ ಮೇಲೆ ಇಳುವರಿ ಶೇ.5ಕ್ಕೆ ಇಳಿದಿದೆ. ಇದೇ ರೀತಿ ಮುಂದುವರೆದರೆ ಕಾರ್ಖಾನೆಗೆ ನಷ್ಟವಾಗುವುದರಿಂದ ರನ್ನಿಂಗ್ ಪರ್ಮೆಂಟಿಗೆ ಕಾಲಮಿತಿ ನೀಡುವುದರ ಜತೆಗೆ ಕಬ್ಬು ನುರಿಸುವಿಕೆ ಸ್ಥಳಿತಗೊಳಿಸಿ ಮುಂದಿನ ಹಂಗಾಮಿಗೆ ಕಾರ್ಖಾನೆಯನ್ನು ಸರಿಪಡಿಸಿಕೊಳ್ಳಬೇಕೆಂದು ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಒತ್ತಾಯಿಸಿದರು.
ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಾಗುವ ನಷ್ಟಕ್ಕೆ ಆಡಳಿತ ಮಂಡಳಿಯ ಹೊಣೆಯಾಗಬೇಕಾಗುತ್ತದೆ. ರಾಜ್ಯ ಸರ್ಕಾರ 50 ಕೋಟಿ ರೂ ಕೊಟ್ಟಿದ್ದು, ಈ ಬಗ್ಗೆ ಗಮನ ನೀಡಬೇಕಿದೆ. ಕಳೆದ ಹತ್ತು ದಿನದಲ್ಲಿ ಕೇವಲ 3,686 ಟನ್ ಕಬ್ಬು ಸರಬರಾಜಾಗಿದೆ. ಇದರಿಂದ ಕಾರ್ಖಾನೆ ಹೆಚ್ಚು ನಷ್ಟ ಅನುಭವಿಸಬೇಕಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಖಾನೆಯ ಸಹವಿದ್ಯುತ್ ಘಟಕ ಪ್ರಾರಂಭವಾಗಿ 12.21 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. ಇದರಲ್ಲಿ 4.93 ಲಕ್ಷ ಯುನಿಟ್ ವಿದ್ಯುತ್ ಇಲಾಖೆ ಈಗಾಗಲೇ ಸೆಸ್ಕಾಂಗೆ ಸರಬರಾಜು ಮಾಡಿದೆ. ಅಕ್ಕಪಕ್ಕದ ಕಾರ್ಖಾನೆಗಳು ಈ ಹಿಂದೆ 30 ಕಿ.ಮೀ ದೂರಕ್ಕೆ 280 ರೂ ಬಾಡಿಗೆಯನ್ನು ಜೂನ್-ಜುಲೈ ತಿಂಗಳಲ್ಲಿ ಪಡೆಯುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ 160 ರೂ ಪಡೆಯುತ್ತಿದ್ದಾರೆ. ನಂತರ ಬಾಡಿಗೆ ಇಲ್ಲದೆ ಕಬ್ಬನ್ನು ಸರಬರಾಜು ಮಾಡಿ ಎಂದು ರೈತರಿಗೆ ಚಾಂಷುಗರ್ಸ್ ಹಾಗೂ ಐಸಿಎಲ್ ಕಾರ್ಖಾನೆ ಕಬ್ಬು ತೆಗೆದುಕೊಂಡು ಹೋಗುತ್ತಿದ್ದಾರೆಂದು ಆರೋಪಿಸಿದರು.
ಇನ್ನು ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಬರ ಪರಿಹಾರಕ್ಕೆ ರೈತರಿಂದ ಆರ್‌ಟಿಸಿ ಕೊಡಿ ಎಂದು ಕಂದಾಯ ಅಧಿಕಾರಿಗಳು ಕೇಳುತ್ತಿದ್ದಾರೆ. ರೈತರು ಈಗಾಗಲೇ ಸಂಕಷ್ಟದಲ್ಲಿ ಸಿಲುಕಿದ್ದು, ಕಂದಾಯ ಇಲಾಖೆಯಲ್ಲಿ ಎಲ್ಲ ದಾಖಲಾತಿ ಇರುವುದರಿಂದ ಅದನ್ನು ಕೃಷಿ ಇಲಾಖೆಗೆ ನೀಡಿದರೆ ರೈತರಿಗೆ ಬಹಳ ಅನುಕೂಲವಾಗುತ್ತದೆ. ರೈತರ ಜಮೀನಿನ ಖಾತೆ ಪುಸ್ತಕ ರಾಜಸ್ವ ನಿರೀಕ್ಷಕರ ಬಳಿ ಇದ್ದು, ಅದನ್ನು ಮರು ಸೃಷ್ಟಿ ಮಾಡಿ ರೈತರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು. ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಮುಂದಿನ ಮೇ ತಿಂಗಳವರೆಗೆ ನೀರು ಹರಿಸಬೇಕಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸುವಂತೆ ಆಗ್ರಹಿಸಿದರು.
ನಾಗರಾಜು, ಎಂ.ಎಲ್.ತುಳಸಿಧರ್, ಅಶೋಕ್, ಇಂಡುವಾಳು ಬಸವರಾಜು ಇದ್ದರು.