

ಮಂಡ್ಯ: ರಾಜ್ಯದಲ್ಲಿ ನಡೆಸುತ್ತಿರುವ ಸಮೀಕ್ಷೆಗೆ ಸಂಬಂಧಿಸಿದಂತೆ ಗಣತಿದಾರರಿಗೆ ಸರಿಯಾದ ತರಬೇತಿ ನೀಡದ ಕಾರಣ ಸಮರ್ಪಕ ಮಾಹಿತಿ ಪಡೆಯುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಮರು ಸಮೀಕ್ಷೆ ನಡೆಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು ಆಗ್ರಹಿಸಿದರು.
ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡದೇ ಗೊಂದಲದ ಗೂಡಾಗಿದೆ. ಮುಖ್ಯವಾಗಿ ಒಕ್ಕಲಿಗ ಸಮುದಾಯದವನ್ನು ಗುರಿಯಾಗಿಸಿಕೊಂಡು ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಮೀಕ್ಷೆದಾರರು ತಪ್ಪು ಮಾಹಿತಿ ನಮೂದಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಕಂಡು ಬಂದಿದೆ. ಅದಲ್ಲದೇ ದೂರವಾಣಿ ಮೂಲಕವೂ ಸಮೀಕ್ಷೆಯ ಸಂಬಂಧ ದೂರುಗಳು ಕೇಳಿಬರುತ್ತಿವೆ. ಸರ್ಕಾರ ಕಡಿಮೆ ಸಮಯ ನಿಗದಿ ಮಾಡಿ, ತರಾತುರಿಯಲ್ಲಿ ಸಮೀಕ್ಷೆ ಮಾಡುತ್ತಿರುವುದರ ಹಿನ್ನಲೆ ಏನು ಎಂದು ಸಂಶಯ ವ್ಯಕ್ತಪಡಿಸಿದರು.
ತಪ್ಪು ಮಾಹಿತಿ ಸಂಗ್ರಹಿಸುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುವ ಸಂಭವವಿದೆ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿ ಹೋರಾಟ ಮಾಡಲಾಗುತ್ತಿದೆ. ತರಬೇತಿ ಕೊರತೆಯಿಂದ ತಪ್ಪು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡಿ ನಂತರ ಮರು ಸಮೀಕ್ಷೆ ನಡೆಸಲು ಮುಂದಾಗಬೇಕು. ಸಮೀಕ್ಷೆಯ ವೇಳೆ ಒಕ್ಕಲಿಗ ಸಮುದಾಯದವರು ಧರ್ಮ ಕಾಲಂನಲ್ಲಿ ಹಿಂದು, ಜಾತಿ ಹಾಗೂ ಉಪಜಾತಿ ಎರಡೂ ಕಾಲಂಗಳಲ್ಲಿ ಒಕ್ಕಲಿಗ ಎಂದು ಮಾತ್ರವೇ ನಮೂದಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಸಮೀಕ್ಷೆದಾರರಿಗೆ ಎಲ್ಲಿಯೂ ಸರಿಯಾದ ತರಬೇತಿ ನೀಡಲಾಗಿಲ್ಲ. ತೋಚಿದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಮೀಕ್ಷೆದಾರರಿಗೆ ತರಬೇತಿ ನೀಡಿದ ಮಾಹಿತಿ ನಗರಸಭೆಯ ಅಧ್ಯಕ್ಷನಾಗಿದ ನನಗೆ ತಿಳಿದಿಲ್ಲ. ಮೊದಲು ಜಾತಿ ಸಮೀಕ್ಷೆ ಎಂದೇಳಿ ಇದೀಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎನ್ನುತ್ತಿದ್ದಾರೆ. ಈ ಸಮೀಕ್ಷೆಯಿಂದ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಘವೇಂದ್ರ, ಎಲ್.ಕೃಷ್ಣ, ಸಿ.ಜೆ.ಗಂಗಾಧರ್, ತಿಮ್ಮೇಗೌಡ, ಸಿ.ಜೆ.ತಮ್ಮಯ್ಯ, ವೇಣುಗೋಪಾಲ್ ಇದ್ದರು.