

ಮಂಡ್ಯ: ಲೋಪ ಪ್ರಶ್ನಿಸಿದವರನ್ನು ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವದಿಂದ ತೆಗೆದುಹಾಕುವ ಹುನ್ನಾರ ನಡೆಸುವುದರ ಜತೆಗೆ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪಸ್ವರ ಎತ್ತಿದವರು ಮಂಡ್ಯದವರೇ ಆಗಿದ್ದಾರೆಂದು ಅಪಪ್ರಚಾರ ಮಾಡುತ್ತಿರುವ ಅಧ್ಯಕ್ಷ ಡಾ.ಮಹೇಶ ಜೋಶಿ ಅವರು ಕೂಡಲೇ ಜಿಲ್ಲೆಯ ಜನರಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದೆ ಮಂಡ್ಯ ಜಿಲ್ಲೆಗೆ ಬರಲು ಬಿಡುವುದಿಲ್ಲ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ ಎಚ್ಚರಿಕೆ ನೀಡಿದರು.
ಸಮ್ಮೇಳನದ ಸಿದ್ಧತೆಗಳು ಆರಂಭವಾದಾಗಿನಿಂದ ಅಂತ್ಯದವರೆಗೂ ಒಂದಲ್ಲ ಒಂದು ವಿಚಾರವೆತ್ತಿ ಅವಾಂತರ ಸೃಷ್ಟಿಸಿದ್ದಲ್ಲದೆ, ಒಡೆದ ಮನಸ್ಸುಗಳನ್ನು ಒಂದುಗೂಡಿಸಿದ ಮಂಡ್ಯ ಸಮ್ಮೇಳನ ಎಂದು ಅಸಂಬದ್ಧ ಹೇಳಿಕೆ ನೀಡಿರುವ ಡಾ.ಮಹೇಶ ಜೋಶಿ ಅವರು ಕ್ಷಮೆಯಾಚಿಸಬೇಕು. ಹಾವೇರಿ ಸಮ್ಮೇಳನದ ಮಾದರಿ ವಿಚಾರವೆತ್ತಿ ಕಾವು ಹೊತ್ತಿಸಿ ಪ್ರತಿ ಹಂತದಲ್ಲೂ ಜಿಲ್ಲೆಯ ಸಾಹಿತ್ಯದ ಮನಸ್ಸುಗಳನ್ನು ಒಡೆದಿದ್ದಾರೆ. ಈ ಹಿಂದೆ ನಡೆದ ಎರಡು ಸಮ್ಮೇಳನಗಳಲ್ಲಿ ದುಡಿದವರು, ಜಿಲ್ಲೆಯಲ್ಲಿ ಕಸಾಪವನ್ನು ಕಟ್ಟಿದ ಮಾಜಿ ಅಧ್ಯಕ್ಷರು, ಜಿಲ್ಲೆಯ ಸಾಹಿತಿಗಳನ್ನು ಅತ್ಯಂತ ನಿಕೃಷ್ಟವಾಗಿ ಕಂಡು ಅವಮಾನ ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಸಾಹಿತಿಗಳು, ಮಾಜಿ ಅಧ್ಯಕ್ಷರು, ಸಂಘಟಕರು, ಹೋರಾಟಗಾರರು, ಕನ್ನಡ ಸಂಘಟನೆಗಳನ್ನು ನಿರ್ಲಕ್ಷಿೃಸಿದಲ್ಲದೆ, ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಪ್ರತಿ ಹಂತದಲ್ಲೂ ತೊಂದರೆ ನೀಡಿ ಅವಮಾನಿಸಿದ್ದಾರೆ. ಸಮ್ಮೇಳನದ ಸಂಪೂರ್ಣ ಯಶಸ್ಸಿಗೆ ಸಹಕರಿಸಿದವರು, ದುಡಿದವರಿಗೆ ಒಂದು ಕೃತಜ್ಞತೆ ಸಲ್ಲಿಸದೆ ಹಗಲಿರುಳು ದುಡಿದ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ಏಕಾಏಕಿ ವಿಸರ್ಜಿಸಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೃಷ್ಣೇಗೌಡ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಕೆ.ಜೆ.ಸುರೇಶ್, ಪ್ರೊ.ಎಸ್.ಮಂಜು, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಸ್.ಜವರೇಗೌಡ ಹಾಜರಿದ್ದರು.