ಬೆಂಗಳೂರಿಗೆ ನೀರು ಮಂಡ್ಯಕ್ಕೆ ಮರಣಶಾಸನ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಆತಂಕ

Press conference of JDS former MLA Mandya
Published on

ಮಂಡ್ಯ: ಬೆಂಗಳೂರಿಗೆ ಕುಡಿಯವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಹೊಸ ಯೋಜನೆ ಸಿದ್ಧಗೊಳಿಸಲಾಗುತ್ತಿದೆ. ಇದರಿಂದ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ 500 ಎಂಎಲ್‌ಡಿ ನೀರನ್ನು ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆ. ಆದರೆ ಈ ಯೋಜನೆಯಿಂದ ಜಿಲ್ಲೆಯ ರೈತರಿಗೆ ಅದರಲ್ಲಿಯೂ ವಿಶ್ವೇಶ್ವರಯ್ಯ ನಾಲೆಯ ಕೊನೇ ಭಾಗದ ರೈತರಿಗೆ ಮರಣ ಶಾಸನವಾಗಲಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಆತಂಕ ವ್ಯಕ್ತಪಡಿಸಿದರು.

6,939 ಕೋಟಿ ರೂಗಳ ಯೋಜನೆ ತಯಾರಿಸಿ ಭೂ ಸ್ವಾಧಿನಕ್ಕೂ ಆದೇಶ ಹೊರಡಿಸಲಾಗಿದೆ. ಈ ಯೋಜನೆಯಿಂದ ಮದ್ದೂರು ಮತ್ತು ಮಳವಳ್ಳಿ ತಾಲೂಕಿನ ಕೊನೆ ಭಾಗದ ರೈತರು ಎರಡನೇ ಬೆಳೆ ಬೆಳೆಯಲು ನೀರು ಸಿಗದಂತಾಗಲಿದೆ. ಬೆಂಗಳೂರಿಗೆ ನೀರುಸಸ ಕೊಡಬೇಡಿ ಎನ್ನುವುದಿಲ್ಲ. ನಾನು ಬೆಂಗಳೂರಿನಲ್ಲೇ ಇದ್ದೇನೆ. ಬೆಂಗಳೂರಿಗೆ ಕುಡಿಯುವ ನೀರು ಬಹಳ ಮುಖ್ಯ. ಪರ್ಯಾಯ ಮೂಲಗಳಿಂದ ನೀರು ಉಳಿಸಿ, ಬೆಂಗಳೂರಿಗೆ ನೀಡಿ ಎಂದು ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ಈ ಹಿಂದೆ ಕಾಂಗ್ರೆಸ್ ನಡಿಗೆ ಮೇಕೆದಾಟು ಕಡೆಗೆ ಪಾದಯಾತ್ರೆ ಮಾಡಿತ್ತು. ಮೇಕೆದಾಟು ಯೋಜನೆಗೆಂದು 1 ಸಾವಿರ ಕೋಟಿ ರೂ ಮೀಸಲಿಟ್ಟಿದ್ದು, ಇದುವರೆಗೂ ಏಕೆ ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿಗೊಳಿಸಿಲ್ಲ. ಮೇಕೆದಾಟು ಯೋಜನೆ ಅನುಷ್ಠಾನಗೊಂಡಿದ್ದರೆ 60 ಟಿಎಂಸಿ ನೀರು ಉಳಿಯುತ್ತಿತ್ತು. ಅಲ್ಲಿಂದಲೇ ನೀರು ಬೆಂಗಳೂರಿನಗೆ ನೀಡಬಹುದಿತ್ತು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೃಪಾ ಕಟಾಕ್ಷದಿಂದ ರೈತರು ಬೆಳೆ ಬೆಳೆದುಕೊಳ್ಳುತ್ತಿದ್ದಾರೆ. ಇದನ್ನು ಹಾಳು ಮಾಡಿ ಹುರುಳಿ, ನವಣೆ ಬೆಳೆಯುವ ಸ್ಥಿತಿ ತರಬೇಡಿ. ನಮ್ಮ ಜಿಲ್ಲೆಯ ರೈತರಿಗೆ ತೆಂಗು, ಹೈನುಗಾರಿಕೆ, ರೇಷ್ಮೆ ಆದಾಯದ ಮೂಲ. ಇದು ತಪ್ಪಿದರೆ ರೈತರ ಸ್ಥಿತಿ ಶೋಚನೀಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

DCT

ಕೆಆರ್‌ಎಸ್ ನಿರ್ಮಾಣವಾದಾಗಿನಿಂದ ಇದುವರೆಗೆ ಒಂದೂವರೆ ತಿಂಗಳು ಸತತವಾಗಿ 124 ಅಡಿ ನೀರು ಸಂಗ್ರಹ ಹೊಂದಿರುವ ದಾಖಲೆ ಹೊಂದಿದೆ. ಆದರೆ ಈಗಲೂ ಕಡೇ ಭಾಗದ ರೈತರು ನೀರಿಗಾಗಿ ಪ್ರತಿಭಟನೆ ಮಾಡುವುದನ್ನು ಕಾಣುತ್ತಿದ್ದೇವೆ. 124 ಅಡಿ ನೀರಿದ್ದರೂ ಕೊನೆ ಭಾಗಕ್ಕೆ ಏಕೆ ನೀರು ಕೊಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ ಡಿ.ಸಿ.ತಮ್ಮಣ್ಣ, ಈಗ 500 ಎಂಎಲ್‌ಡಿ ನೀರು ಬೆಂಗಳೂರಿಗೆ ನೀಡುವುದಾದರೆ, ಮುಂದೆ ಈ ಭಾಗದ ರೈತರ ಪರಿಸ್ಥಿತಿ ಏನಾಗಬೇಕು. ಸರ್ಕಾರ ಈ ಯೋಜನೆ ಕೈ ಬಿಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದರು.

ರೈತರು ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಷ್ಟವನ್ನು ಅನುಭವಿಸುವಂತಾಗುತ್ತದೆ. ಆದ್ದರಿಂದ ಈ ಯೋಜನೆ ಪ್ರಾರಂಭವಾಗದಂತೆ ಎಚ್ಚರವಹಿಸಬೇಕು. ಕಾಂಗ್ರೆಸ್ ಸರ್ಕಾರ ನ್ಯಾಯಾಲಯದ ಮೂಲಕ ಹೋರಾಟ ಮಾಡಿ ಮೇಕೆದಾಟು ಯೋಜನೆ ಜಾರಿಗೆ ತರಲಿ. ಒಟ್ಟಾರೆ ಜಿಲ್ಲೆಯ ರೈತರರಿಗೆ ಅನ್ಯಾಯ ಮಾಡಬೇಡಿ ಎಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಜಿಲ್ಲಾಧ್ಯಕ್ಷ ಜಯರಾಂ ಇದ್ದರು.

ಇದೆನಾ ಮಂಡ್ಯಕ್ಕೆ ಕಾಂಗ್ರೆಸ್ ಉಡುಗೊರೆ?

ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿ ಕೆರೆಯಿಂದ ನೀರು ಸರಬರಾಜು ಆಗುತ್ತಿತ್ತು. ಆದರೀಗ ನೇರವಾಗಿ ಕೆಆರ್‌ಎಸ್‌ನಿಂದ ನೀರು ಒದಗಿಸಲು ಮುಂದಾಗಿದ್ದಾರೆ. ಬೆಂಗಳೂರಿಗೆ ನೀರು ಕೊಡಬೇಡಿ ಎಂದು ಹೇಳಲಾಗದು. ಇತರೆ ನದಿಗಳ ಅಣೆಕಟ್ಟು ಮೂಲದಿಂದ ನೀರು ಕೊಡಲಿ. ನಮಗೆ ಮೀಸಲಿಟ್ಟ ನೀರು ಕೊಂಡೊಯ್ದರೆ, ಮಂಡ್ಯ ಜಿಲ್ಲೆಯ ರೈತರ ಬದುಕೇನು ಎಂದು ಪ್ರಶ್ನಿಸಿದರು.

ಈಗಾಗಲೇ ಬೆಂಗಳೂರಿಗೆ ಹಲವು ಯೋಜನೆಗಳ ಮೂಲಕ ನೀರು ನೀಡಲಾಗುತ್ತಿದೆ. ನಾಲ್ಕು ಮತ್ತು ಐದನೇ ಯೋಜನೆಗೆ ನೀರು ನೀಡಲಾಗುತ್ತಿದ್ದು, ಈಗ ಆರನೇ ಯೋಜನೆಗೂ ನೀರು ನೀಡುವುದಾದರೆ ಮಂಡ್ಯ ಜಿಲ್ಲೆಯ ರೈತರ ಪರಿಸ್ಥಿತಿ ಏನು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಏನೋ ಮಾಡಲು ಹೋಗಿ ಮತ್ತೇನೋ ಮಾಡುವ ಪರಿಸ್ಥಿತಿಯಿಂದ ದೂರವಿರಲಿ ಎಂದು ಕಿವಿಮಾತು ಹೇಳಿದರು.

ಜಿಲ್ಲೆಯ ಜನರು ಪಾಂಡವಪುರ ಸೇರಿ 6 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಜಿಲ್ಲೆಯ ರೈತರ ನೀರು ಕಸಿದುಕೊಳ್ಳುತ್ತೀದ್ದೀರಿ. ಇದೇನಾ ಕಾಂಗ್ರೆಸ್ ಸರ್ಕಾರ ಮಂಡ್ಯ ಜನಕ್ಕೆ ನೀಡುವ ಉಡುಗೊರೆ?. ಬೆಂಗಳೂರಿನ ಹಿತದೃಷ್ಠಿ ನೋಡಿದರೆ ಸಾಲದು, ಮಂಡ್ಯ ಜಿಲ್ಲೆಯ ರೈತರ ಹಿತದೃಷ್ಠಿ ಕಾಪಾಡಬೇಕು. ಮೇಕೆದಾಟು ಯೋಜನೆಗಾಗಿ ತಮಿಳುನಾಡಿನ ಸಿಎಂ ಸ್ಟಾಲಿನ್ ಅವರನ್ನು ಒಪ್ಪಿಸಿಕೊಳ್ಳಿ. ಐಎನ್‌ಡಿಐಎ ಒಕ್ಕೂಟವನ್ನು ನಿರ್ಮಿಸಿಕೊಂಡಿದ್ದೀರಿ. ಹೋಗಿ ಕೇಳಿ ಎಂದರು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಗೌಡ ವಿಚಾರವಾಗಿ ಪೊಲೀಸರು ತನಿಖೆ ಮಾಡಬೇಕು. ಅವರ ಸಂಪರ್ಕದಲ್ಲಿ ಯಾರಿದ್ದಾರೆ, ಯಾವ ವ್ಯವಹಾರ ಮಾಡಿದ್ದಾರೆ ಎಂಬುದು ಬಹಿರಂಗವಾಗಬೇಕು. ಯಾವುದೇ ಆರೋಪ ಮಾಡಬೇಕಾದರೆ ಅದರಲ್ಲಿ ತಿರುಳಿರಬೇಕು. ಸಾಕ್ಷಿ ಒದಗಿಸದೇ ಆರೋಪ ಮಾಡಿದರೆ, ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ. ಆಕೆ ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಎಲ್ಲರನ್ನೂ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net