

ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜೂ.9ರಂದು ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಹಾಗೂ ಒರೆಗಲ್ಲು ಕೃತಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ ತಿಳಿಸಿದರು.
ಬೆಳಗ್ಗೆ 10ಗಂಟೆಗೆ ಗಾಯಕಿ ಎಂ.ಡಿ.ಪಲ್ಲವಿ ನೇತೃತ್ವದ ತಂಡದಿಂದ ಭಾವಗಾಯನ ಆಯೋಜಿಸಲಾಗಿದೆ. 11.30ಕ್ಕೆ ವೇದಿಕೆ ಸಮಾರಂಭವಿರಲಿದೆ. 2023ನೇ ಸಾಲಿನಲ್ಲಿ ಒಟ್ಟು 33 ಕಥಾಸಂಕಲನಗಳು ಆಯ್ಕೆ ಸಮಿತಿಯ ಮುಂದೆ ಬಂದಿದ್ದವು. ಅಂತಿಮವಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಪೊನ್ನಾಚಿ ಗ್ರಾಮದ ಸ್ವಾಮಿ ಪೊನ್ನಾಚಿ ಅವರ ‘ದಾರಿ ತಪ್ಪಿಸುವ ಗಿಡ’ ಕಥೆಗಳು ಆಯ್ಕೆಯಾಗಿದೆ. ಇವರಿಗೆ ಅಂದು 25 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದಿನ ಕಾರ್ಯಕ್ರಮದಲ್ಲಿ ಲೇಖಕ ಪ್ರೊ.ಕಾಳೇಗೌಡ ನಾಗವಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ವಿಜೇತ ಕಥಾ ಸಂಚಲನ ಕುರಿತು ವಿಮರ್ಶಕಿ ಆರ್.ಸುನಂದಮ್ಮ ಮಾತನಾಡಲಿದ್ದಾರೆ. ಮುಖ್ಯಅತಿಥಿಗಳಾಗಿ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಪ್ರಶಸ್ತಿ ಪುರಸ್ಕೃತ ಕೃತಿಯ ಲೇಖಕ ಪೊನ್ನಾಚಿ ಸ್ವಾಮಿ, ಪ್ರತಿಷ್ಠಾನದ ಅಜೀವ ಸದಸ್ಯೆ ಡಿ.ಪಿ.ರಾಜಮ್ಮ ರಾಮಣ್ಣ ಭಾಗವಹಿಸಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ಪ್ರತಿಷ್ಠಾನದ ಸದಸ್ಯ ರಾಜೇಂದ್ರಪ್ರಸಾದ್, ಹಿತೈಷಿ ರಾಕೇಶ್ ಇದ್ದರು.