ಮೈಶುಗರ್‌ಗೆ 10 ಕೋಟಿ ರೂ ಅನುದಾನ: ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಮಾಹಿತಿ

Mysugar President C.D.Gangadhar
Published on

ಮಂಡ್ಯ: ಮೈಶುಗರ್ ಕಾರ್ಖಾನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ 10 ಕೋಟಿ ರೂ ಆರ್ಥಿಕ ನೆರವು ನೀಡಿದೆ. ಇದರೊಂದಿಗೆ ಮೂರನೇ ಬಾರಿ ಅನುದಾನ ಕೊಟ್ಟಂತಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ತಿಳಿಸಿದರು.

ಪ್ರಸಕ್ತ ಸಾಲಿನ ಹಂಗಾಮಿಗೆ ಕಬ್ಬು ಅರೆಯಲು ಅಗತ್ಯವಿರುವ ದುಡಿಯುವ ಬಂಡವಾಳದ ಉದ್ದೇಶಕ್ಕಾಗಿ 10 ಕೋಟಿ ರೂಗಳನ್ನು ಸಾಲವಾಗಿ ನೀಡಿದೆ. 2023-24ನೇ ಸಾಲಿನಲ್ಲಿ 50 ಕೋಟಿ ರೂ ದುಡಿಯುವ ಬಂಡವಾಳ ನೀಡಿತ್ತು. ಮಾತ್ರವಲ್ಲದೆ 53 ಕೋಟಿ ರೂಗಳ ವಿದ್ಯುತ್ ಬಿಲ್ ಮನ್ನಾ ಮಾಡಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಸಾಲಿನಲ್ಲಿ ಕಬ್ಬು ಕಟಾವು ಮಾಡುವ ಕೂಲಿಯಾಳು ಮತ್ತು ಸಾರಿಗೆ ವೆಚ್ಚಕ್ಕೆ 15 ಕೋಟಿ ರೂ ಹಾಗೂ ದುಡಿಯುವ ಬಂಡವಾಳ 25 ಕೋಟಿ ರೂ ಅಗತ್ಯವಿರುವುದರಿಂದ 40 ಕೋಟಿ ರೂ ಬಿಡುಗಡೆ ಮಾಡುವಂತೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು ಕೋರಿದ್ದರು. ಕಳೆದ ಬಾರಿ ಬರದ ನಡುವೆಯೂ ಯಶಸ್ವಿಯಾಗಿ ಕಬ್ಬು ನುರಿಸಲಾಗಿತ್ತು. ಮಾತ್ರವಲ್ಲದೆ 20 ವರ್ಷದ ನಂತರ ಸರ್ಕಾರದ ಅನುದಾನ ಪಡೆಯದೆ ರೈತರಿಗೆ ಪೂರ್ಣ ಹಣವನ್ನು ಪಾವತಿ ಮಾಡಿ ಮಾದರಿಯಾಗಿದ್ದೇವೆ. ಈ ಬಾರಿಯೂ ಸೀನಿಯಾರಿಟಿ ಪ್ರಕಾರ 100 ಬ್ಯಾಚುಗಳು ಕಬ್ಬು ಕಟಾವು ಮಾಡುತ್ತಿವೆ. ಪ್ರತಿನಿತ್ಯ 2,500 ಟನ್ ಕಬ್ಬು ನುರಿಸಲು ಸಿದ್ಧತೆ ನಡೆದಿದೆ. ಈ ಬಾರಿ ಕನಿಷ್ಟ 3.5 ಲಕ್ಷದಿಂದ 4 ಲಕ್ಷ ಟನ್ ಕಬ್ಬು ಅರೆಯುತ್ತೇವೆ ಎಂದು ಮಾಹಿತಿ ನೀಡಿದರು.

ಕಾರ್ಖಾನೆಗೆ ಸೇರಿದ 7 ಎಕರೆ ವಾಣಿಜ್ಯ ಪ್ರದೇಶ ಮತ್ತು 26 ಎಕರೆ ಕಂದಾಯ ಪ್ರದೇಶ ಒತ್ತುವರಿಯಾಗಿದೆ. ಈಗಾಗಲೇ ನಗರದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ 38 ಗುಂಟೆ ಜಾಗವನ್ನು ಡಿಜಿಟಲ್ ಸರ್ವೇ ಮಾಡಿಸಿದ್ದೇವೆ. ಹಂತ ಹಂತವಾಗಿ ಒತ್ತುವರಿ ತೆರವುಗೊಳಿಸಿ ಜಾಗವನ್ನು ಕಾರ್ಖಾನೆ ಸ್ವಾಧೀನಕ್ಕೆ ಪಡೆಯುತ್ತೇವೆ. ಒಂದು ವೇಳೆ ತೆರವುಗೊಳಿಸದಿದ್ದರೆ ಕಾರ್ಖಾನೆಯ ನಾಮಫಲಕ ಹಾಕುತ್ತೇವೆ. ನಂತರ ನಾವು ನಿಗದಿಪಡಿಸಿದ ಬಾಡಿಗೆಯನ್ನು ಅವರು ಕಟ್ಟಬೇಕಾಗುತ್ತದೆ. ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಯಾವುದೇ ಒತ್ತಡ ಬಂದಿಲ್ಲ. ಪ್ರಭಾವಿ ಒತ್ತುವರಿಯನ್ನು ಮಾಡಿಕೊಂಡಿವೆ. ಆದಾಗ್ಯೂ ಯಾವುದೇ ಒತ್ತಡಕ್ಕೆ ಮಣಿಯದೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಸುರೇಶ್, ವೀಣಾ ಶಂಕರ್, ಉದಯ್, ನಾಗರಾಜು, ಎಂ.ಎನ್.ಶ್ರೀಧರ್, ಸಿ.ಎಂ.ದ್ಯಾವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net