

ಮಂಡ್ಯ: ಸುಪ್ರೀಂ ನ್ಯಾಯಾಲಯದ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಂಬೇಡ್ಕರ್ ಚಿಂತಕ ಅಂದಾನಿ ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಜಾರಿಗೊಳಿಸಲು ಆದೇಶ ನೀಡಿ 6 ತಿಂಗಳು ಕಳೆದರೂ ರಾಜ್ಯ ಸರ್ಕಾರ ಕಾಲಾಹರಣ ಮಾಡುತ್ತಿದೆ. ಹೋರಾಟದ ಫಲವಾಗಿ ಆಯೋಗ ನಿರ್ಮಾಣಕ್ಕೆ ಮುಂದಾದ ಸರ್ಕಾರ, ತದನಂತರವೂ ವಿಳಂಭ ನೀತಿ ಅನುಸರಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಒಳಮೀಸಲಾತಿ ಜಾರಿಯಾಗುವವರೆಗೂ ಹೊಸ ನೇಮಕಾತಿ ಮಾಡುವುದಿಲ್ಲ ಎಂದು ತೀರ್ಮಾನ ಕೈಗೊಂಡು, ಈಗ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಮುಖ್ಯಸ್ಥರನ್ನು ನೇಮಿಸಿ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಸಮಾಜಕಲ್ಯಾಣ ಇಲಾಖೆಯ ಸಚಿವ ಈ ಕಾರ್ಯಕ್ಕೆ ಮುಂದಾಗಿದ್ದು, ಅವರಿಗೆ ಒಳಮೀಸಲಾತಿಯ ವಿರೋಧ ಇರುವುದು ವ್ಯಕ್ತವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್ಸಿಪಿ/ಟಿಎಸ್ಪಿ ಯೋಜನೆ ಜಾರಿಗೆ ತಂದ ಸಿದ್ದರಾಮಯ್ಯ ಅವರು ಹಾಲಿ ತಮ್ಮ ಸರ್ಕಾರದ ಅವಧಿಯಲ್ಲಿಯೇ ಯೋಜನೆಯ ಹಣವನ್ನು ಗ್ಯಾರೆಂಟಿ ಯೋಜನೆ ಹಾಗೂ ಇನ್ನಿತರ ವಿಷಯಗಳಿಗೆ ಬಳಕೆ ಮಾಡುತ್ತಿದೆ. ಈ ಮೂಲಕ ಶೋಷಿತ ಸಮುದಾಯಕ್ಕೆ ಅನ್ಯಾಯವೆಸಗುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಬಿ.ಕೃಷ್ಣ, ಸಿದ್ದರಾಜು, ಗವಿ ಇದ್ದರು.