ಜನರ ನೆರವಿಗೆ ಬಾರದ ಸರ್ಕಾರ, ವಿಪಕ್ಷಗಳು: ಕಿಸಾನ್ ಸಂಘದ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು ಆಕ್ರೋಶ

Press conference against the state government Mandya
Published on

ಮಂಡ್ಯ: ರಾಜ್ಯದಲ್ಲಿ ಮಳೆಯಿಂದಾಗಿ ಜನರ ಬದುಕು ಮೂರಾಬಟ್ಟೆಯಾಗಿದೆ. ಇಂತಹ ಸಮಯದಲ್ಲಿ ರೈತರ ನೆರವಿಗೆ ಬರಬೇಕಾದ ರಾಜ್ಯಸರ್ಕಾರ, ವಿರೋಧ ಪಕ್ಷಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶರಾಜು ಆರೋಪಿಸಿದರು.

ಲಕ್ಷಾಂತರ ಹೆಕ್ಟೇರ್ ಫಸಲು ಇದ್ದ ಭೂಮಿ ಜಲಾವೃತವಾಗಿ ರೈತರ ಬದುಕು ಅತಂತ್ರವಾಗಿದೆ. ಮಲೆನಾಡು, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಬೆಳೆ ಪ್ರವಾಹಕ್ಕೆ ಸಿಲುಕಿ ನಲುಗಿಹೋಗಿದೆ. ಪ್ರವಾಹ ಪೀಡಿತ ಸ್ಥಳಗಳಿಗೆ ಜನಪ್ರತಿನಿಧಿಗಳು ಭೇಟಿ ನೀಡದೆ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಹಲವು ತಿಂಗಳಿಂದ ಹಾಲಿಗೆ ಪ್ರೋತ್ಸಾಹ ಧನ ವಿತರಣೆ ಮಾಡದಿರುವುದರಿಂದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಕ್ರಮ ಸಕ್ರಮದಲ್ಲಿ ಹಣ ಕಟ್ಟಿದರೆ ಪಂಪ್‌ಸೆಟ್ ಅಗತ್ಯವಿರುವ ಟಿಸಿ, ಕಂಬಗಳು, ವೈಯರ್‌ಗಳ ಖರ್ಚನ್ನು ಸರ್ಕಾರ ಭರಿಸುತ್ತಿತ್ತು. ಆದರೀಗ ಸಂಪೂರ್ಣವಾಗಿ ರೈತನೇ ಎಲ್ಲವನ್ನೂ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಬ್ ರಿಜಿಸ್ಟ್ರ್‌ರ್‌ನಲ್ಲಿ ಸ್ಟ್ಯಾಂಪ್ ಡ್ಯೂಟಿ ರೈತನ ವಿಷಯದಲ್ಲಿ ತುಂಬಾ ಕಡಿಮೆ ಇತ್ತು. ಆದರೆ ಈಗ ಎರಡರಿಂದ ಮೂರು ಪಟ್ಟು ಹೆಚ್ಚಳವಾಗಿದೆ. ರೈತ ವಿದ್ಯಾರ್ಥಿ ನಿಧಿ ರೈತ ಮಕ್ಕಳಿಗೆ ಸಿಗುತ್ತಿದ್ದ ಸೌಲಭ್ಯವನ್ನು ಸರ್ಕಾರ ನಿಲ್ಲಿಸಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ವರ್ಷಕ್ಕೆ ನಾಲ್ಕು ಸಾವಿರದಂತೆ ಹಿಂದೆ ಇದ್ದ ಸರ್ಕಾರ ನೀಡುತ್ತಿತ್ತು. ಆದರೆ ಈಗ ಯಾವುದೇ ಹಣ ಬರುತ್ತಿಲ್ಲ. ರೈತನಿಗೆ ಉಚಿತವಾಗಿ ಬಿತ್ತನೆ ಬೀಜ ನೀಡಬೇಕಿತ್ತು. 25 ರಿಂದ 30 ರೂ. ಬೆಲೆ ಏರಿಕೆ ಮಾಡಿ ರೈತ ವಿರೋಧಿ ಸರ್ಕಾರ ಎನ್ನುವುದನ್ನು ಸಾಬೀತು ಮಾಡಿದೆ ಎಂದು ಆರೋಪಿಸಿದರು.

ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಮುಖಂಡರಾದ ಬಸವರಾಜು, ಪುಟ್ಟಮ್ಮ, ಸಲ್ಮಾನ್, ಜಯರಾಂ, ಅಶೋಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net