

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಗ್ರಾಮದಲ್ಲಿ ನಡೆದ ದಲಿತ ಸಮುದಾಯ ಯುವಕ ಜಯಕುಮಾರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಜಯಕುಮಾರ್ ಪತ್ನಿ ಲಕ್ಷ್ಮೀ ದೂರಿದರು.
ಘಟನೆ ಸಂಬಂಧಿಸಿದಂತೆ ಹಲವು ಸಂಘಟನೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆತ್ಮಸ್ಥೈರ್ಯ ತುಂಬಿದರು. ಆದರೆ ಘಟನೆಯ ಮುನ್ನ ಹಾಗೂ ಪತಿಯ ಮರಣ ನಂತರ ವಿಷಯಗಳನ್ನು ತಿಳಿಸಿ ಆರಂಭದಲ್ಲಿ ಸಹಕರಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಘಟನೆ ನಡೆದ ದಿನ ಸಮಾಜ ಕಲ್ಯಾಣ ಇಲಾಖೆಯ ವಾಹನದಲ್ಲಿಯೇ ಪೊಲೀಸ್ ಠಾಣೆಗೆ ಕರೆದೊಯ್ದು ವಕೀಲ ಪ್ರಸಾದ್ ಹಾಗೂ ನನ್ನ ಸಂಬಂಧಿಕರ ಎದುರೇ ಪೊಲೀಸರಿಗೆ ದೂರು ಬರೆದು ಕೊಡಲಾಗಿದ್ದು, ಅಲ್ಲಿ ಆತ್ಮಹತ್ಯೆ ಎಂದು ಮತ್ತೆ ದೂರು ಬರೆದುಕೊಟ್ಟಿದ್ದು ಯಾರು ಎಂಬುದು ತಿಳಿಯದು. ನನಗೆ ತಿಳಿಯದಂತೆ ಪೊಲೀಸರು ಎರಡು ಬಾರಿ ಸಹಿ ಮಾಡಿಸಿಕೊಂಡಿದ್ದು ದಿಕ್ಕು ತಪ್ಪಿಸಿದ್ದಾರೆ. ಪತಿ ಜಯಕುಮಾರ್ ಕೊಲೆಗೆ ಅನಿಲ್‌ಕುಮಾರನೇ ಕಾರಣವಾಗಿದ್ದು, ಆತನಿಗೆ ಶಿಕ್ಷೆಯಾಗಬೇಕು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಇಲಾಖೆಯಿಂದ ದೊರೆಯುವ ಸೌಲಭ್ಯ ಮಂಜೂರು ಮಾಡಿಸುವ ಭರವಸೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಗ್ಗೆ ಕೆಲ ಸಂಘಟನೆಗಳ ಆರೋಪಿಸುವುದು ಸರಿಯಲ್ಲ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್‌ನ ರಾಜ್ಯಾಧ್ಯಕ್ಷ ಎಚ್.ಜಿ.ಗಂಗರಾಜು ಮಾತನಾಡಿ, ಪ್ರಕರಣ ಸಂಬಂಧ ಲೋಪವೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವುದಾಗಿ ಐಜಿ ಹಾಗೂ ಡಿಐಜಿ ಅವರು ಭರವಸೆ ನೀಡಿದ್ದು, ತಾತ್ಕಾಲಿಕವಾಗಿ ಹೋರಾಟ ಹಿಂಪಡೆಯಲಾಗಿದೆ. ಅವರು ತಾವು ಹೇಳಿದಂತೆ ನಡೆಯದೇ ಹೋದಲ್ಲಿ ಕಾನೂನಾತ್ಮಕ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಭೀಮ್ ಸೇನೆ ರಾಜ್ಯಾಧ್ಯಕ್ಷ ಜೆ.ಪ್ರಸನ್ನ, ರಾಜ್ಯಾಧ್ಯಕ್ಷೆ ಸಿ.ಎಂ.ಮಮತಾ, ಗೌರವಾಧ್ಯಕ್ಷ ಎಸ್.ಬಿ.ಶಂಕರ್, ಜಿಲ್ಲಾಧ್ಯಕ್ಷ ನಿರಂಜನ್, ಸಲಹೆಗಾರ ಡಿ.ಸ್ವಾಮಿ ಇದ್ದರು.