

ಮಂಡ್ಯ: ಕನ್ನಡಕ್ಕೆ ಧಕ್ಕೆಯಾಗುಂತಹ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ರಾಜ್ಯಸರ್ಕಾರ ತಿರಸ್ಕರಿಸಬೇಕು. ಕಾರಣ, ಇದು ಕನ್ನಡದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಕರ್ನಾಟಕ ರಾಜರ್ಷಿ ಫೌಂಡೇಷನ್ ಅಧ್ಯಕ್ಷ ಹರಿಪ್ರಸಾದ್ ಆರೋಪಿಸಿದರು.
ಎನ್‌ಇಪಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುವಂತಹ ವಿಧಿಗಳನ್ನು ಸೇರಿಸಲಾಗಿದೆ. ಇದರಿಂದಾಗಿ ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿಯುವಂತಹ ವಾತಾವರಣ ನಿರ್ಮಾಣವಾಗಿದೆ. ರಾಷ್ಟ್ರೀಯತೆ ನೆಪದಲ್ಲಿ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರುವ ಹುನ್ನಾರ ನಡೆಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕನ್ನಡ ಸ್ವಯಂಸೇವಕರ ಸಂಘದ ಅಧ್ಯಕ್ಷ ರವಿಕಿರಣ್ ಮಾತನಾಡಿ, ಎನ್‌ಇಪಿ ಮೂಲಕ ಮೂಲಕ ಕನ್ನಡ ಭಾಷೆಯನ್ನು ಕುಗ್ಗಿಸಲು ಹೊರಟಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕನ್ನಡ ಕೇವಲ ಐಚ್ಚಿಕ ಭಾಷೆಯನ್ನಾಗಿ ಆಯ್ಕೆ ಮಾಡುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಕನ್ನಡದ ನೆಲದಲ್ಲಿ ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದ ಅವರು, ಲೋಕಸೇವಾ ಆಯೋಗ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಕೇವಲ ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ ಮಾತ್ರ ಇರುತ್ತದೆ. ಮಾತೃಭಾಷೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳುತ್ತಿದ್ದರೂ, ಕೇವಲ ಐಚ್ಚಿಕ ಭಾಷೆಯನ್ನಾಗಿ ಮಾತ್ರ ಬಳಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಮೈಸೂರು ಸಂಸ್ಥಾನದಿಂದಲೇ ಆರಂಭಗೊಂಡ ಬ್ಯಾಂಕಿಂಗ್, ರೈಲ್ವೆ ವ್ಯವಸ್ಥೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುವ ಕನ್ನಡಿಗರು ಕೆಲವೇ ಜನರು ಮಾತ್ರ. ಇದರಲ್ಲಿ ಬಹುಪಾಲು ಉತ್ತರರಾಜ್ಯಗಳವರೇ ಹೆಚ್ಚಿದ್ದಾರೆ. ಹೀಗಾದರೆ ಕನ್ನಡದ ಅಸ್ಮಿತೆ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಅಖಿಲ ಭಾರತ ಕನ್ನಡ ಮತದಾರ ಬಳಗದ ಸಂಚಾಲಕ ರವಿಶಂಕರ್ ಗುರೂರು, ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಮುಖಂಡರಾದ ಉಮ್ಮಡಹಳ್ಳಿ ನಾಗೇಶ್, ಜೋಸೆಫ್ ಇದ್ದರು.