

ಮಂಡ್ಯ: ಬಿಜೆಪಿ ನಾಯಕರು ಜಿಲ್ಲೆಯಲ್ಲಿ ಕೋಮುಗಲಭೆಗೆ ಪ್ರಚೋಧನೆ ನೀಡುವ ಮೂಲಕ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ ಆರೋಪಿಸಿದರು.
ನಾಗಮಂಗಲ ಗಲಾಟೆಗೆ ಸಂಬಂಧಿಸಿದಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಾಗಮಂಗಲ, ಕೆರಗೋಡು, ಶ್ರೀರಂಗಪಟ್ಟಣ ಇವರ ಕೇಂದ್ರಬಿಂದುವಾಗಿದ್ದು, ಜಿಲ್ಲೆಯ ಜನರು ನೆಮ್ಮದಿಯಾಗಿ ಇರುವುದು ಬಿಜೆಪಿಗರಿಗೆ ಇಷ್ಟವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಂಡ್ಯದಲ್ಲಿ ಐತಿಹಾಸಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ನಾಗರಿಕರಿಗೆ ದ್ವೇಷದ ವಿಷ ನೀಡುತ್ತಿದ್ದಾರೆ. ಇಂತಹ ಕೃತ್ಯಕ್ಕೆ ಜಿಲ್ಲೆಯ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದ ಅವರು, ಬಿಜೆಪಿ ಶಾಸಕ ಮುನಿರತ್ನ ಸಮಾಜಕ್ಕೆ ಮಾರಕ. ಒಕ್ಕಲಿಗ ಹಾಗೂ ದಲಿತ ಸಮುದಾಯವನ್ನು ನಿಂದನೆ ಮಾಡಿರುವ ಆತನ ವಿರುದ್ಧ ಒಕ್ಕಲಿಗ ಸ್ವಾಮೀಜಿಗಳು ಪ್ರತಿಕ್ರಿಯಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್‌ನ ಸುಂಡಹಳ್ಳಿ ಮಂಜುನಾಥ್, ಶ್ರೀಕಂಠಯ್ಯ, ವೀಣಾ ಶಂಕರ್, ನೀಲಾ, ಕೆ.ಎಲ್.ನಾಗೇಂದ್ರ, ಕೆ.ಸಿ.ಮಹೇಶ್ ಇದ್ದರು.