ಉಡುಪಿ ಜಿಲ್ಲೆಯಲ್ಲಿ ಪುನರ್​ ವಸತಿ ಕೇಂದ್ರ ಸ್ಥಾಪನೆ ಅತೀ ಅಗತ್ಯ

udp-18-samvada
Published on

ಉಡುಪಿ: ಪರಿತ್ಯಕ್ತ ಮಹಿಳೆಯರು, ಮಕ್ಕಳು, ವೃದ್ಧರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಣೆ ಮಾಡಿದ ತಕ್ಷಣ ಆಶ್ರಯ ಕಲ್ಪಿಸಲು ಆನುಕೂಲವಾಗುವಂತೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅಗ್ರಹಿಸಿದರು.

ಮಂಗಳವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ರಜತ ಮಹೋತ್ಸವ ಸಮಿತಿ ಹಾಗೂ ಹಿರಿಯಡ್ಕ ಸಂಸತಿ ಸಿರಿ ಟ್ರಸ್ಟ್​ ಸಹಯೋಗದಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂಕ್ತ ಪುನರ್ವಸತಿ ಸೌಲಭ್ಯವಿಲ್ಲದೆ ನಿರಾಶ್ರಿತರು ಮತ್ತೆ ಬೀದಿಗೆ ಬೀಳುತ್ತಿದ್ದಾರೆ. ಮಹಿಳೆಯರು, ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡಲು ನಿಮಾಸ್ಹ ಮಾದರಿಯಲ್ಲಿ ಅರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು. ಇಲಾಖೆಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ 20 ವರ್ಷಗಳಿಂದ ಮನವಿ ನೀಡಿದರೂ ಯಾವುದೇ ಸ್ಪಂದನೆಯಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಮಾತನಾಡಿ, ಮಲ್ಪೆ ಬೀಚ್​ ತೀರದಲ್ಲಿ ಅನೇಕ ಹೋಂ ಸ್ಟೆಗಳು ತಲೆ ಎತ್ತಿವೆ. ಆದರೆ ತಮ್ಮಲ್ಲಿಗೆ ಬರುವ ಪ್ರವಾಸಿಗರ ರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಜಿಲ್ಲಾಡಳಿತ ಲೈಪ್​ ಗಾರ್ಡ ಹೊಂದಿರುವವರಿಗೆ ಮಾತ್ರ ಅನುಮತಿ ನೀಡಬೇಕು. ಸಮುದ್ರದಲ್ಲಿ ತೇಲಿಬರುವ ಅನಾಥ ಶವಗಳನ್ನು ಸಾಗಿಸಲು ಸಿ&ಆ್ಯಂಬುಲೆನ್ಸ್​ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್​ರಾಜ್​ ಸರಳೇಬೆಟ್ಟು ಮಾತನಾಡಿದರು.

ಸಂಸತಿ ಸಿರಿ ಟ್ರಸ್ಟ್​ನ ಆಡಳಿತ ವಿಶ್ವಸ್ಥ ಹಾಗೂ ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ರಜತಮಹೋತ್ಸವ ಸಮಿತಿ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು.

ಪತ್ರಕರ್ತ ಶಶಿಧರ ಮಾಸ್ತಿಬೈಲು ಪ್ರಸ್ತಾವನೆಗೈದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್​ ಷರೀಫ್​ ವಂದಿಸಿದರು. ಪತ್ರಕರ್ತ ಮೈಕಲ್​ ರೋಡ್ರಿಗಸ್​ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net