ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡಿಕೊಳ್ಳಿ,ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ ಮನವಿ

IMG_20230813_175734_987-2.jpg
Published on

ಹುಬ್ಬಳ್ಳಿ: ನಮ್ಮ ಸಂವಿಧಾನವು ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ. ಇಂತಹ ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರೂ ಕಾಪಾಡಿಕೊಳ್ಳಬೇಕು. ಸುಳ್ಳು ಮತ್ತು ತಿರುಚಿದ ಸುದ್ದಿಗಳಿಂದ ಅಪಚಾರ ಎಸಗಬಾರದು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಹೇಳಿದರು.

ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಸುದ್ದಿ ವಾಹಿನಿಗಳಲ್ಲಿ ಸಿನಿಮಾ,- ರಾಜಕಾರಣ, ಅಪರಾಧ ಸುದ್ದಿಗಳೇ ಆವರಿಸಿಕೊಂಡು ಜನರ ನಿಜವಾದ ಸಮಸ್ಯೆಗಳು ಹಿನ್ನೆಲೆಗೆ ಸರಿಯುವಂತಾಗಿವೆ. ಟಿಆರ್ಪಿ ದಾಹದಿಂದಾಗಿ ಸತ್ಯಕ್ಕೆ ಅಪಚಾರ ಆಗಬಾರದು. ಪತ್ರಕರ್ತರು ಮತ್ತು ಮಾಧ್ಯಮಗಳು ಬಹಳ ಜವಾಬ್ದಾರಿ, ಮಾನವೀಯತೆಯಿಂದ ವತಿರ್ಸಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಆತ್ಮಾವಲೋಕನ ಇಂದಿನ ಅಗತ್ಯ: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಆತ್ಮಾವಲೋಕನದ ಅವಶ್ಯಕತೆ ಕಂಡು ಬರುತ್ತಿದೆ. ಆಗಲೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಯಾವುದೇ ಕ್ಷೇತ್ರವು ಪ್ರಬಲವಾದಷ್ಟು ಅಲ್ಲಿ ಭ್ರಷ್ಟಾಚಾರವೂ ಹೆಚ್ಚುತ್ತದೆ. ಪ್ರಜಾಪ್ರಭುತ್ವ ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಪತ್ರಿಕಾ ರಂಗದಿಂದ ಮಾತ್ರ ಸಾಧ್ಯವಿದೆ. ಇಂತಹ ಬದಲಾವಣೆಗೆ ಪತ್ರಕರ್ತರು ಅಣಿಯಾಗಬೇಕು ಎಂದರು.

ಜೊಳ್ಳು ಹೊರ ತಳ್ಳಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರಿಗೆ ಬದ್ಧತೆ ಬೇಕು. ಬ್ಲಾಕ್ಮೇಲ್, ವಿಸಿಟಿಂಗ್ ಕಾರ್ಡ್ ಪತ್ರಕರ್ತರು ಸುದ್ದಿ ಮನೆಯೊಳಗಡೆ ಬರುತ್ತಿರುವುದು ವಿಪರ್ಯಾಸ. ಇದನ್ನು ಸ್ವಚ್ಛ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೊಬ್ಬರನ್ನು ನೋಯಿಸುವ ಕಾರ್ಯ ಅರೆಬೆಂದ ಪತ್ರಕರ್ತರಿಂದ ಆಗುತ್ತಿದೆ. ಜೊಳ್ಳು ಪತ್ರಕರ್ತರನ್ನು ಹೊರ ತಳ್ಳುವುದಕ್ಕೆ ಎಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ಹೇಳಿದರು.

ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮನೋಜ ಪಾಟೀಲ ಅವರು, ಪತ್ರಕರ್ತರಿಗೆ ನಿವೃತ್ತಿ ನಂತರ ಸೂಕ್ತ ಪಿಂಚಣಿ ನೀಡಬೇಕು. ಕಾಮಿರ್ಕ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ಪತ್ರಕರ್ತರು ತಮ್ಮ ವೃತ್ತಿ ಗೌರವವನ್ನು ಸದಾ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.

ಅವ್ವ ಪತ್ರಕರ್ತೆ ಪ್ರಶಸ್ತಿ ಸ್ವೀಕರಿಸಿದ ಚಂದ್ರಿಕಾ ನಾಯಕ ಅವರು, ಹುಬ್ಬಳ್ಳಿ ನನಗೆ ವೃತ್ತಿಯನ್ನು ಕಲಿಸಿದೆ. ಮಹಿಳೆ ಎಂಬ ಭೇದ ಮಾಡದೇ ಎಲ್ಲರೂ ನನ್ನವರಾಗಿ ನಡೆದುಕೊಂಡರು. ಮಹಿಳೆಯಾಗಿ ಯಾವುದೇ ಹಿಂಜರಿಕೆ ಇಲ್ಲದೇ ಒಂದು ಹೆಜ್ಜೆ ಮುಂದೆ ಇಟ್ಟರೆ ಬದುಕು ಮುಂದೆ ಕರೆದುಕೊಂಡು ಹೋಗುತ್ತದೆ ಎಂದು ಅನುಭವ ಹಂಚಿಕೊಂಡರು.

ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಪ್ರದಾನ:ವಿಜಯವಾಣಿಯ ಕಲಟಗಿ ವರದಿಗಾರ ವೀರೇಶ ಹಾರೂಗೇರಿ, ಉಪ್ಪಿನಬೆಟಗೇರಿಯ ಶಿವಪ್ರಭು ಈಸರಗೊಂಡ, ಹುಬ್ಬಳ್ಳಿಯ ವಿಶ್ವನಾಥ ಹೊಸೂರ ಹಾಗೂ ದಿಗ್ವಿಜಯ ನ್ಯೂಸ್ ಹುಬ್ಬಳ್ಳಿ ವರದಿಗಾರ ಪ್ರಕಾಶ ಹಿರೇಮಠ, ಕ್ಯಾಮರಾಮನ್ ವಿನಾಯಕ ಪೂಜಾರಿ ಸೇರಿ ಅತ್ಯುತ್ತಮ ಲೇಖನ, ಪುಟವಿನ್ಯಾಸ ಮಾಡಿದ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net