ಬೌದ್ಧಿಕ ದಿವಾಳಿತನ ತೋರಿದ ಪ್ರೊ.ಕೆ.ಎಸ್.ಭಗವಾನ್: ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಟೀಕೆ

Sathnuru Venugopal mandya
Published on

ಮಂಡ್ಯ: ಒಕ್ಕಲಿಗ ಸಮುದಾಯದವರು ಹೀನ ಸಂಸ್ಕೃತಿ ಹಾಗೂ ಪಶುಗಳಿಗೆ ಸಮಾನರೆಂಬ ಹೇಳಿಕೆ ನೀಡುವ ಮೂಲಕ ಪ್ರೊ.ಕೆ.ಎಸ್.ಭಗವಾನ್ ಅವರ ಬೌದ್ಧಿಕ ದಿವಾಳಿತನ ತೋರಿದ್ದಾರೆಂದು ಮೈಷುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ 1936 ಕಾಲಘಟ್ಟದ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿಯನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಕಾದಂಬರಿ ರಚನೆಗೊಂಡು ಸುಮಾರು 87 ವರ್ಷವಾಗಿದೆ. ಇಲ್ಲಿಯವರೆಗೆ ಸಾಕಷ್ಟು ಜನ ಕಾದಂಬರಿಯನ್ನು ಓದಿದ್ದು, ಯಾರಿಗೂ ಗಮನಕ್ಕೆ ಬಾರದ ವಿಚಾರ ಕೇವಲ ಇವರ ಗಮನಕ್ಕೆ ಬಂದಿರುವುದು ಹಾಗೂ ಇಂದಿನ ವೈಜ್ಞಾನಿಕ ಕಾಲಘಟ್ಟದಲ್ಲಿ ಅದನ್ನು ಉಲ್ಲೇಖಿಸಿರುವುದು ಅವರ ಪ್ರಚಾರದ ಹಪಪಿತನಕ್ಕೆ ಸಾಕ್ಷಿಯಾಗಿದೆ. ಮಾತ್ರವಲ್ಲದೆ ಅವರ ಅವಿವೇಕತನ ಮತ್ತು ದಾರಿದ್ಯದ ಸಂಕೇತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಸಮಾಜದಲ್ಲಿ ಜಾತಿಗಳ ಮಧ್ಯೆ ಇರುವಂತ ಸಾಮಾಜಿಕ ಕಂದಕ ದೂರಾಗಿ ಕೇವಲ ಆರ್ಥಿಕ ಅಸಮಾನತೆ ಮಾತ್ರ ಕಂಡು ಬರುವಂತಹದ್ದಾಗಿದೆ. ಒಕ್ಕಲಿಗ ಸಮಾಜದವರು ಉನ್ನತ ವಿದ್ಯೆಯನ್ನು ಗಳಿಸಿಕೊಂಡು ಸಮಾಜದಲ್ಲಿ ಆಯಕಟ್ಟಿನ ಸ್ಥಾನಮಾನದಲ್ಲಿ ಕುಳಿತು ಜಾತ್ಯಾತೀತವಾಗಿ ಕೊಡುಗೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಭಗವಾನ್ ಹೇಳಿಕೆ ಸಮಾಜದ ಶಾಂತಿಯನ್ನು ಕದಡುವಂತ ಕೃತ್ಯವಾಗಿದೆ. ಆದ್ದರಿಂದ ರಾಜ್ಯಸರ್ಕಾರ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಮುಂದೆ ಇಂತಹ ಮನಸ್ಥಿತಿಯ ಜನಗಳು ಜಾತ್ಯಾತೀತತೆ ಹೆಸರಲ್ಲಿ ಸಮಾಜದ ಶಾಂತಿಯನ್ನು ಕದಡುವಂತ ಕೆಲಸಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net