

ಸೋಮವಾರಪೇಟೆ: ಇಲ್ಲಿನ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎ.ಆದಂ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನೂತನ ಸಮಿತಿಯ ಸದಸ್ಯರಾಗಿ ಬೇಳೂರು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎನ್.ಬಸವರಾಜು, ಕಾಂಗ್ರೆಸ್ ಕಾರ್ಯಕರ್ತ ಲೋಹಿತಾಶ್ವ ಹಾಗೂ ಚೌಡ್ಲು ಗ್ರಾಮದ ದರ್ಶನ್ ಅವರಿಗೆ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಅವರು ಗುರುವಾರ ನೇಮಕಾತಿ ಆದೇಶ ನೀಡಿದ್ದಾರೆ.
ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಚುನಾಯಿತ ಸದಸ್ಯರೊಬ್ಬರು, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
2020ರ ನವೆಂಬರ್‌ನಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದ್ದಾಗ ಅಂದಿನ ಶಾಸಕ ಅಪ್ಪಚ್ಚುರಂಜನ್ ಅವರ ವಿಶೇಷ ಪ್ರಯತ್ನದಿಂದಾಗಿ ರಾಜ್ಯ ಸರ್ಕಾರ ಸೋಮವಾರಪೇಟೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತ್ತು. ಆದರೆ ಮೂರು ವರ್ಷಗಳ ಸುದೀರ್ಘ ಅವಧಿಯವರೆಗೆ ಸಮಿತಿ ಅಸ್ತಿತ್ವಕ್ಕೆ ಬಂದಿರಲಿಲ್ಲ.
ನೂತನ ಸಮಿತಿ ರಚನೆಯಿಂದಾಗಿ ಸೋಮವಾರಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಕುಶಾಲನಗರ ಹಾಗೂ ಮಡಿಕೇರಿಗೆ ಅಲೆದಾಡುವುದು ತಪ್ಪಿದಂತಾಗಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಚೌಡ್ಲು, ಹಾನಗಲ್, ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಹಾಗೂ ನೇಗಳ್ಳೆ-ಕರ್ಕಳ್ಳಿ ಗ್ರಾಮದ ಕೆಲವು ಸ್ಥಳಗಳ ನಾಗರಿಕರಿಗೆ ಅನುಕೂಲವಾಗಲಿದೆ.