

ಮಂಗಳೂರು: ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರನ್ನು ರೆಡ್‌ಕ್ರಾಸ್ ಸೊಸೈಟಿಯ ದ.ಕ ಜಿಲ್ಲಾ ಶಾಖೆಯ ತಂಡದವರು ಭೇಟಿಯಾದರು.
ಕೋವಿಡ್ 19ರ ಸಂದಿಗ್ಧ ಪರಿಸ್ಥಿತಿಯಲ್ಲೂ ರೆಡ್‌ಕ್ರಾಸ್‌ನ ಜಿಲ್ಲಾ ಶಾಖೆಯು ಕೈಗೊಂಡಿದ್ದ ವಿವಿಧ ಸೇವಾ ಕಾರ್ಯಗಳ ಬಗ್ಗೆ ವಿವರಗಳನ್ನು ನೀಡಲಾಯಿತು. ಮನೆ ಮನೆಗೆ ತೆರಳಿ ಮಲಗಿರುವ ಹಾಗೂ ವಯೋವೃದ್ಧರಿಗೆ ರೆಡ್‌ಕ್ರಾಸ್ ವತಿಯಿಂದ ಲಸಿಕಾ ಕಾರ್ಯಕ್ರಮದ ಬಗ್ಗೆ ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶಾದ್ಯಂತ ರೆಡ್‌ಕ್ರಾಸ್ ಸ್ವಯಂಸೇವಕರು ಮೌಲ್ಯಾತೀತವಾಗಿ ಕೆಲಸ ಮಾಡುತ್ತಿದ್ದಾರೆ ಎಂದೂ ತಿಳಿಸಿದರು.
ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ರೆಡ್‌ಕ್ರಾಸ್ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಗೌರವ ಕಾರ್ಯದರ್ಶಿ ಎಸ್.ಎ.ಪ್ರಭಾಕರ ಶರ್ಮ, ರಾಜ್ಯ ನಿರ್ವಹಣಾ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ ಹಾಜರಿದ್ದರು. ಇದೇ ವೇಳೆ ಕಲಾವಿದ ಗಣೇಶ ಸೋಮಯಾಜಿ ಅವರು ರಚಿಸಿದ ಯಕ್ಷಗಾನ ಕಲಾಕೃತಿಯನ್ನು ರಾಷ್ಟ್ರಪತಿಯವರಿಗೆ ಸ್ಮರಣಿಕೆಯಾಗಿ ನೀಡಲಾಯಿತು.