

ಉಡುಪಿ: ಕೇರಳದ ಪ್ಲಾಂಟೇಶನ್ ಕಾರ್ಪೊರೇಶನ್ ಗೋದಾಮುಗಳಲ್ಲಿ ಉಳಿದಿದ್ದ ವಿಷಕಾರಕ ಕೀಟ ನಾಶಕವನ್ನು ಅಕ್ರಮವಾಗಿ ಕೇರಳದ ಮಿಂಚಿನಪದವು ಗುಡ್ಡಗಾಡು ಪ್ರದೇಶದ ಪಾಳು ಬಾವಿಯಲ್ಲಿ ಹೂತಿರುವ ಪ್ರಕರಣದಲ್ಲಿ ಮಣ್ಣು ಮತ್ತು ನೀರಿನಲ್ಲಿ ಎಂಡೋಸಲ್ಫಾನ್ ಅಂಶ ಪತ್ತೆಯಾಗಿಲ್ಲ ಎಂಬ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೇರು ಕಾಪೋರ್ರೇಶನ್ ನಿವೃತ್ತ ಸಿಬ್ಬಂದಿ ಅಚ್ಚುತ ಮಣಿಯಾಣಿ 2013ರಲ್ಲಿ ನೀಡಿದ ಹೇಳಿಕೆ ಪ್ರಕಾರ, ಸುಮಾರು 600 ಲೀಟರ್ ಎಂಡೋಸಲ್ಫಾನನ್ನು ಕೇರಳ- ಕರ್ನಾಟಕದ ಗಡಿಭಾಗದ ಮಿಂಚಿನಪದವು ಎಂಬಲ್ಲಿರುವ ಗೇರು ತೋಟದಲ್ಲಿ ಹೂಳಿದ್ದಾರೆ ಎನ್ನಲಾಗಿದೆ. ಪಾಳು ಬಾವಿಯಲ್ಲಿ ಹಾಕಿರುವ 30ಅಡಿ ಮಣ್ಣನ್ನು ಹೊರತೆಗೆದು ಅದರ ಕೆಳಗೆ ಎಂಡೋಸಲ್ಫಾನ್ ತುಂಬಿದ ಕ್ಯಾನ್ಗಳಿವೆಯೇ ಎಂಬುದನ್ನು ಖಚಿತಪಡಿಸುವ ಬದಲು ಈ ಭಾಗದ ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಎಂಡೋಸಲ್ಫಾನ್ ಅಂಶವಿಲ್ಲ ಎಂಬುದಾಗಿ ಬಾಲಿಶ ಪ್ರಕಟಣೆ ನೀಡಲಾಗಿದೆ ಎಂದು ಆರೋಪಿಸಿದರು.
ಪ್ರಕರಣದ ಹಿನ್ನೆಲೆ
ಎಂಡೋಸಲ್ಫಾನ್ ಹೂತಿಟ್ಟಿರುವ ವಿಷಯ ನಮ್ಮಗಮನಕ್ಕೆ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ದ.ಕ ಜಿಲ್ಲಾಡಳಿತಕ್ಕೆ ಆಗಾಗ ಮನವಿ ಸಲ್ಲಿಸಿದರೂ 10 ವರ್ಷ ಸಮಸ್ಯೆ ಪರಿಹಾರವಾಗಲಿಲ್ಲ. ಪ್ರಕರಣದ ವಿಚಾರಣೆಯನ್ನು ನಡೆಸಿ ಸೂಕ್ತ ಆದೇಶ ನೀಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ವಿನಂತಿಸಲಾಗಿತ್ತು. ದೂರು ಅರ್ಜಿಯನ್ನು ಸ್ವೀಕರಿಸಿದ ನ್ಯಾಯ ಮಂಡಳಿಯು ಅಕ್ರಮವಾಗಿ ಹೂಳಲಾಗಿದ್ದ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಹಾಗೂ ಕೇರಳ ಸರ್ಕಾರ, ಕೇಂದ್ರ ಸರ್ಕಾರ, ಕರ್ನಾಟಕ ಹಾಗೂ ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತ್ತು. ಪಾಳು ಬಾವಿಯಲ್ಲಿ ಎಂಡೋಸಲ್ಫಾನ್ ಕ್ಯಾನುಗಳಿವೆಯೆ ಎಂಬುದನ್ನು ಖಚಿತಪಡಿಸುವ ಬದಲು ಘಟನೆ ನಡೆದು 12 ವರ್ಷಗಳ ನಂತರ ಮೇಲ್ಪದರದಲ್ಲಿರುವ ಮಣ್ಣಿನ ಹಾಗೂ ನೀರಿನ ಸ್ಯಾಂಪಲ್ಗಳನ್ನು ಪರಿಶೀಲಿಸಿ ಇವುಗಳಲ್ಲಿ ಎಂಡೋಸಲ್ಫಾನ್ ಅಂಶವಿಲ್ಲ ಎಂಬ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂಬುದಾಗಿ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವುದು ನ್ಯಾಯಸಮ್ಮತವಲ್ಲ. ಈ ಎಲ್ಲಾ ವಿಚಾರಗಳನ್ನು ವಕೀಲರ ಮೂಲಕ ಡಿ.2ರಂದು ನಡೆಯುವ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನ ಕಾರ್ಯದರ್ಶಿ ಅನಿಲ್, ವಕೀಲ ಅನುರಾಗ್ ಉಪಸ್ಥಿತರಿದ್ದರು.