ಸಂಘಟಿತ ಹೋರಾಟ ಅಗತ್ಯ : ನೌಕರರ ಸಂಘದ ಅಧ್ಯಕ್ಷ ಗಂಗಾಧರ್

23Tmk_JOC_Programme
Published on

ತುಮಕೂರು: ಸಂಘಟಿತ ಹೋರಾಟದಿಂದ ವೃತ್ತಿ ಶಿಕ್ಷಣ ನೌಕರರು ಗುರಿ ಈಡೇರಿಸಿಕೊಳ್ಳಲು ಸಾಧ್ಯ ಎಂದು ಅಖಿಲ ಕರ್ನಾಟಕ ವೃತ್ತಿ ಶಿಕ್ಷಣ(ಜೆಒಸಿ) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಂಘದ ಅಧ್ಯಕ್ಷ ಗಂಗಾಧರ್ ಹೇಳಿದರು.

ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಭಾನುವಾರ ಅಖಿಲ ಕರ್ನಾಟಕ ವೃತ್ತಿ ಶಿಕ್ಷಣ(ಜೆಒಸಿ) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜೆಒಸಿಯಿಂದ ವಿಲೀನಗೊಂಡ ನೌಕರರ ಪರವಾಗಿರುವ ಸರ್ಕಾರ ಇದುವರೆಗೂ ಯಾರ ಪರವಾಗಿ ಬಂದಿಲ್ಲ. ಹಾಗಾಗಿ, ನಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.

ಹಳೇ ಪಿಂಚಣಿ ವ್ಯವಸ್ಥೆ, ಸೇವಾಭದ್ರತೆ ಜಾರಿಗೆ ನೌಕರರು ಸಂಘಟಿತರಾಗಿ ಹೋರಾಟ. ಜೆಒಸಿ ವೃತ್ತಿ ನಿರತರರಿಗೆ ಸೇವಾ ಭದ್ರತೆಯನ್ನು ಒದಗಿಸುವುದಕ್ಕಾಗಿ ಸಂಘಟನೆ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ. ಅಂಗನವಾಡಿ ನೌಕರರನ್ನು ಮಾದರಿಯನ್ನಾಗಿಸಿಕೊಂಡರೆ ಸರ್ಕಾರದ ಗಮನಸೆಳೆಯಲು ಸಾಧ್ಯ ಎಂದು ಹೇಳಿದರು.

ರಾಜ್ಯದಲ್ಲಿ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವೃತ್ತಿನಿರತ ನೌಕರರನ್ನು ಹಳೇ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕು. ಹಿಂದಿನ ಸೇವೆ ಪರಿಗಣಿಸಿ ಸೌಲಭ್ಯ ನೀಡಬೇಕು. 2011ರ ವಿಧೇಯಕ ತಿದ್ದುಪಡಿ ಮಾಡುವ ಮೂಲಕ ನೌಕರರಿಗೆ ಪಿಂಚಣಿ ನೀಡದೇ ಹೋದರೆ ಕುಟುಂಬಕ್ಕೆ ತೊಂದರೆ ತಪ್ಪಿದ್ದಲ್ಲ, ಈ ನಿಟ್ಟಿನಲ್ಲಿ ಹೋರಾಟಕ್ಕೆ ಒತ್ತು ನೀಡಬೇಕಿದೆ ಎಂದು ಜಿಲ್ಲಾಧ್ಯಕ್ಷ ಟಿ.ಆರ್.ನರಸಿಂಹಮೂರ್ತಿ ತಿಳಿಸಿದರು.

ರಾಜ್ಯ ಜಂಟಿ ಸಂಘಟನಾ ಕಾರ್ಯದರ್ಶಿ ಎಸ್. ಟಿ.ವೆಂಕಟೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ, ರಾಮಚಂದ್ರ, ಖಜಾಂಚಿ ಶರಣಪ್ಪ , ಮಂಜೇಗೌಡ ರಂಗಸ್ವಾಮಿ, ವಿಮಲಾ ಮತ್ತಿತರರು ಉಪಸ್ಥಿತರಿದ್ದರು.

ವಿಧೇಯಕ ತಿದ್ದುಪಡಿ ಆಗಬೇಕು: ವೃತ್ತಿ ಶಿಕ್ಷಣದಿಂದ ವಿಲೀನಗೊಂಡಿರುವ ನೌಕರರು ಮೃತಪಟ್ಟರೆ ಅವರ ಕುಟುಂಬ ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಲೀನಗೊಂಡ ನಂತರ 3,700 ನೌಕರರ ಸೇವೆ ಪರಿಗಣಿಸಿಲ್ಲ. ಎನ್‌ಪಿಎಸ್ ವ್ಯವಸ್ಥೆಗೆ ನಮ್ಮನ್ನು ಸೇರಿಸಲು ಸಾಧ್ಯವಿಲ್ಲ. 2011ರ ವಿಧೇಯಕದಲ್ಲಿ ನಮ್ಮನ್ನು ಪಿಂಚಣಿಗೆ ಅರ್ಹರಲ್ಲ ಎಂದು ಉಲ್ಲೇಖಿಸಿರುವುದನ್ನು ನಾವು ಗಮನಿಸದೇ ಇರುವುದರಿಂದ ನಾವು ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದೇವೆ. ವಿಧೇಯಕ ತಿದ್ದುಪಡಿ ಆಗಬೇಕಿದೆ ಎಂದು ವಿವಿ ಪುರಂ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net