ರಾಷ್ಟ್ರಪತಿಗಳ ಆತಿಥ್ಯಕ್ಕೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಮಾಹಿತಿ

ramanatha kovinda
Published on

ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ ಅ.7, 8ರಂದು ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಶಿಷ್ಟಾಚಾರದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನಿಂದ ಏರ್ಪಡಿಸಲಾಗಿದ್ದ ವಿಡಿಯೋ ಸಂವಾದದಲ್ಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ರಾಷ್ಟ್ರಪತಿ ಕಚೇರಿಯ ನಿರ್ದೇಶನ ಹಾಗೂ ಶಿಷ್ಟಾಚಾರದಂತೆ ರಾಷ್ಟ್ರಪತಿಗಳು, ಅವರ ಅಧಿಕಾರಿಗಳು, ಸಿಬ್ಬಂದಿಗೆ ವಾಸ್ತವ್ಯ, ಊಟೋಪಚಾರ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುವುದು. ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹ ಸ್ವಚ್ಛತೆ, ಪೀಠೋಪಕರಣ, ಕರ್ಟನ್, ಅಡುಗೆ ಕೋಣೆ ಸಹಿತ ಅಲ್ಲಿನ ಅಗತ್ಯಗಳನ್ನು ಪರಿಶೀಲಿಸಿ, ಉತ್ತಮ ಸೌಲಭ್ಯ ಕಲ್ಪಿಸಲಾಗುವುದು. ಭದ್ರತೆ, ವಿಮಾನ ನಿಲ್ದಾಣದಿಂದ ಅತಿಥಿ ಗೃಹದವರೆಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಅತಿಥಿ ಗೃಹದಲ್ಲಿ ಸಿದ್ಧತೆ ಪರಿಶೀಲಿಸಲು ಆಗಾಗ ಭೇಟಿ ನೀಡಿ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು.

ಆಂಬುಲೆನ್ಸ್ ಹಾಗೂ ವೈದ್ಯರ ತಂಡ ಸಿದ್ಧಗೊಳಿಸಲಾಗಿದೆ. ಸಂಪರ್ಕ ರಸ್ತೆಗಳ ದುರಸ್ತಿಗೆ ಸೂಚಿಸಲಾಗಿದೆ. ರಾಷ್ಟ್ರಪತಿಯವರ ಕಾರ್ಯಕ್ರಮಕ್ಕೆ ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಲು ಲೈಸನಿಂಗ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಆಹಾರ ಸುರಕ್ಷತೆ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. ಮೆಸ್ಕಾಂನಿಂದ ವಿದ್ಯುತ್ ಕಡಿತವಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

ಮನಪಾ ಆಯುಕ್ತ ಅಕ್ಷಿ ಶ್ರೀಧರ್, ಡಿಸಿಪಿ ಹರಿರಾಮ್ ಶಂಕರ್, ಮೆಸ್ಕಾಂ ಎಂಡಿ ಪ್ರಶಾಂತ್ ಮಿಶ್ರ, ಸಹಾಯಕ ಆಯುಕ್ತ ಮದನ್ ಮೋಹನ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಯಶವಂತ್ ಉಪಸ್ಥಿತರಿದ್ದರು.

ಪ್ರವಾಸ ವಿವರ: ರಾಷ್ಟ್ರಪತಿಗಳು ಮೈಸೂರಿನಿಂದ ಅ.7ರಂದು ಸಂಜೆ 6.10ಕ್ಕೆ ಏರ್ ಇಂಡಿಯಾ ಒನ್ ವಿಮಾನದಲ್ಲಿ ಮಂಗಳೂರಿಗೆ ಆಗಮನ. ನಗರದ ಸರ್ಕಿಟ್ ಹೌಸ್ ಅಥವಾ ಓಷನ್ ಪರ್ಲ್ ಹೋಟೆಲ್‌ನಲ್ಲಿ ವಾಸ್ತವ್ಯ. 8ರಂದು ಬೆಳಗ್ಗೆ ಉಪಾಹಾರ ಮುಗಿಸಿ 10.55ಕ್ಕೆ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ. ಹೆಲಿಕಾಪ್ಟರ್‌ನಲ್ಲಿ ಸಾಯಂಕಾಲ 3.45ಕ್ಕೆ ಮಂಗಳೂರಿಗೆ ಆಗಮಿಸಿ ವಾಸ್ತವ್ಯ. 9ರಂದು ಬೆಳಗ್ಗೆ 11ಕ್ಕೆ ದೆಹಲಿಗೆ ವಾಪಸ್.

ಹೊಸ ದಾಖಲೆ: ಅನೇಕ ರಾಷ್ಟ್ರಪತಿಗಳು ಮಂಗಳೂರಿಗೆ ಆಗಮಿಸಿದ್ದರೂ ಎರಡು ದಿನ ವಾಸ್ತವ್ಯ ಹೂಡುವ ಮೊದಲಿಗ ರಾಮನಾಥ್ ಕೋವಿಂದ್ ಆಗಲಿದ್ದಾರೆ. 2018ರಲ್ಲೂ ಕೋವಿಂದ್ ಮಂಗಳೂರಿಗೆ ಬಂದು ಉಡುಪಿಗೆ ತೆರಳಿದ್ದರು. 1970ರ ಮೇ 16ರಂದು ವಿ.ವಿ.ಗಿರಿ ಮಂಗಳೂರಿಗೆ ಬಂದು ಧರ್ಮಸ್ಥಳ- ಉಡುಪಿಗೆ ಭೇಟಿ ನೀಡಿದ್ದರು. 2009ರಲ್ಲಿ ಪ್ರತಿಭಾ ಪಾಟೀಲ್ ಮಂಗಳೂರು ಮೂಲಕ ಶೃಂಗೇರಿಗೆ ತೆರಳಿದ್ದರು. ಪ್ರಣಬ್ ಮುಖರ್ಜಿ 2017ರ ಜೂ.18ರಂದು ಮಂಗಳೂರು ಮೂಲಕ ಕೊಲ್ಲೂರಿಗೆ ತೆರಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net