ಅಧ್ಯಕ್ಷ ಖಂಡನೆ, ಹವಾಲ್ದಾರ ಎಚ್ಚರಿಕೆ

doodpeeram
Published on

ಲಕ್ಷ್ಮೇಶ್ವರ: ಭಾವೈಕ್ಯದ ಕೇಂದ್ರವಾಗಿರುವ ದೂದಪೀರಾಂ ದರ್ಗಾದಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಕಮಿಟಿ ಸಭೆಯಲ್ಲಿ ಕೆಲ ಸದಸ್ಯರು ಪರಸ್ಪರ ದೋಷಾರೋಪಣೆ ಮಾಡಿ, ಅಧ್ಯಕ್ಷನಾದ ನನ್ನನ್ನು ನಿಂದಿಸಿದ್ದಲ್ಲದೆ, ನನ್ನ ವಿರುದಟಛಿ ಪೊಲೀಸ್ ದೂರು ಸಹ ನೀಡಿದ್ದಾರೆ. ಇದು ದುರದೃಷ್ಟಕರ ಸಂಗತಿ. ಅನಿವಾರ್ಯವಾಗಿ ನಾನು ಸಹ ಪ್ರತಿದೂರು ನೀಡಿದ್ದೇನೆ ಎಂದು ಅಧ್ಯಕ್ಷ ಸುಲೇಮಾನ್‌ಸಾಬ ಕಣಕೆ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷದಿಂದ ದರ್ಗಾ ಕಮಿಟಿ ಅಧ್ಯಕ್ಷನಾಗಿ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದೇನೆ. ಆದರೆ, ಕೆಲವರು ಸ್ವಹಿತಾಸಕ್ತಿಯಿಂದ ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ. ದರ್ಗಾ ಕುರಿತ ಲೆಕ್ಕಪತ್ರದಲ್ಲಿ ಅವ್ಯವಹಾರ ಆಗಿದೆಯೆ ಎಂಬ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸಹ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಕಳೆದ ಅವಧಿಯಲ್ಲಿ ಕಾರ್ಯದರ್ಶಿ ಯಾಗಿದ್ದವರು ದೂದಪೀರಾಂ ದರ್ಗಾದ ಹತ್ತಿರವಿರುವ ದುಗ್ಗಾಣಿ ಬಾವಿ ದುರಸ್ತಿಗೆ ಪುರಸಭೆ ಎಸ್‌ಎಫ್‌ಸಿ ಅನುದಾನದಿಂದ ಮಂಜೂರಿಯಾದ 17.59 ಲಕ್ಷ ರೂ.ಗಳಲ್ಲಿ ಅಂದಾಜು 15.59 ಲಕ್ಷ ರೂ.ಗಳನ್ನು ತಮ್ಮ ಸ್ವಂತ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. ಹಣ ಖರ್ಚು ಮಾಡಿರುವ ಬಗ್ಗೆ ಖೊಟ್ಟಿ ಲೆಕ್ಕಪತ್ರ ಬರೆದಿಟ್ಟು ಕಮಿಟಿಗೆ ಮೋಸ ಮಾಡಿದ್ದಾರೆ. ಅದರಲ್ಲಿ 13.45 ಲಕ್ಷ ರೂ. ಖರ್ಚು ಮಾಡಿರುವದಾಗಿ ಮಾಹಿತಿ ನೀಡಿದ್ದು, ಇದರ ಬಗ್ಗೆ ಅನುಮಾನವಿದೆ. ಉಳಿದ 2 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ಕಮಿಟಿಗೆ ಜಮಾ ಮಾಡಿಲ್ಲ. ದರ್ಗಾದಲ್ಲಿಯ ಅನೇಕ ಕಾರ್ಯಕ್ರಮಗಳಿಗೆ ಸಂಬಂ ಧಿಸಿಯೂ ಖೊಟ್ಟಿ ಲೆಕ್ಕ ನೀಡಿರುವ ಬಗ್ಗೆ ಬಲವಾದ ಸಂಶಯವಿದ್ದು, ದಾಖಲೆಗಳೂ ತಮ್ಮ ಬಳಿ ಇವೆ. ಹೀಗಾಗಿ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.

ನೂತನವಾಗಿ ದರ್ಗಾ ಕಮಿಟಿ ಅಸ್ತಿತ್ವಕ್ಕೆ ಬಂದ ಮೇಲೆ ಪ್ರತಿಯೊಂದು ಕೆಲಸಕ್ಕೂ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಕಮಿಟಿ ಸಭೆಯಲ್ಲಿ ಎಲ್ಲ ಲೆಕ್ಕ ಪತ್ರ ಕೇಳಿದ ವೇಳೆಯಲ್ಲಿ ಗಲಾಟೆ ನಡೆಸಿದರು. ನಮ್ಮ ಭಾಗದ ಪ್ರಮುಖ ಶ್ರದಾಟಛಿ ಕೇಂದ್ರವಾದ ದರ್ಗಾದಲ್ಲಿ ಗಲಾಟೆ ನಡೆಸಿದವರನ್ನು ಜನರು ಕ್ಷಮಿಸುವುದಿಲ್ಲ. ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದ್ದು, ಇದೇ ಕಾರಣದಿಂದ ದೂರು ಸಲ್ಲಿಸಿರುವುದಾಗಿ ಅಧ್ಯಕ್ಷರು ಹೇಳಿದರು.

ಆರೋಪಗಳು ನಿರಾಧಾರ

ಲಕ್ಷ್ಮೇಶ್ವರ: ಪಟ್ಟಣದ ದೂದಪೀರಾಂ ದರ್ಗಾ ಕಮಿಟಿ ಅಧ್ಯಕ್ಷರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದಟಛಿ ಮಾಡಿರುವ ಆರೋಪಗಳು ನಿರಾಧಾರವಾಗಿವೆ. ಆದ್ದರಿಂದ ಅಧ್ಯಕ್ಷರು ಸಮಾಜದ ಸಭೆ ಕರೆದು ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ಮಾಡುವುದಾಗಿ ದರ್ಗಾ ಕಮಿಟಿ ಸದಸ್ಯ ಎಸ್.ಕೆ. ಹವಾಲ್ದಾರ ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರು ನನ್ನ ತೇಜೊವಧೆ ಮಾಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಾತನಾಡುವ ಮೊದಲು ಪೂರ್ವಾಪರ ವಿಚಾರ ಮಾಡಬೇಕಾಗಿತ್ತು. ಕಮಿಟಿಯಲ್ಲಿ ನಡೆದಿದೆ ಎನ್ನಲಾಗುವ ಅವ್ಯವಹಾರ ನಮಗೆ ಸಂಬಂಧವಿಲ್ಲ. ಅಧ್ಯಕ್ಷರ ಅಪ್ಪಣೆ ಇಲ್ಲದೆ ಯಾವುದೇ ಕಾರ್ಯವು ಅಲ್ಲಿ ನಡೆದಿಲ್ಲ, 2016-17ರಲ್ಲಿಯೇ ದುಗ್ಗಾಣಿ ಬಾವಿ ಕಾಮಗಾರಿ ನಡೆದಿದ್ದು, ಎಲ್ಲ ಲೆಕ್ಕ ಪತ್ರಗಳು ಸರಿಯಾಗಿವೆ, ಆದರೆ, ಇದೀಗ ತಕರಾರು ತೆಗೆದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ಬಾವಿ ಕೆಲಸಕ್ಕೆ ಮಂಜೂರಿಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ, ಯಾವುದೇ ದುರುಪಯೋಗ ನಡೆದಿಲ್ಲ. ಮಂಜೂರಿಯಾದ 15.59 ಲಕ್ಷ ರೂ.ಗಳಲ್ಲಿ ಜಿಎಸ್‌ಟಿ, ಟಿಡಿಎಸ್ ಎಲ್ಲವನ್ನೂ ಕಳೆದು 13.45 ಲಕ್ಷ ರೂ.ಗಳನ್ನು ಹಂತಹಂತವಾಗಿ ದರ್ಗಾ ಖಾತೆಗೆ ಜಮೆ ಮಾಡಲಾಗಿದೆ. ಇದಕ್ಕೆ ಬ್ಯಾಂಕ್ ಮಾಹಿತಿಯನ್ನು ಸಹ ನೋಡಬಹುದಾಗಿದೆ. ಈ ವ್ಯವಹಾರದಲ್ಲಿ ಎಲ್ಲವೂ ಸರಿ ಇದ್ದು, ಅಂತಹ ಅವ್ಯವಹಾರ ಏನಾದರೂ ನಡೆದಿದ್ದಲ್ಲಿ ಅದಕ್ಕೆ ಅಧ್ಯಕ್ಷರೇ ಕಾರಣ ಎಂದು ತಿರುಗೇಟು ನೀಡಿದರು.

ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ನಮ್ಮ ಮೇಲೆ ಗೂಬೆ ಕೂಡಿಸುವ ಯತ್ನ ನಡೆದಿದೆ. ಲೆಕ್ಕ ಪತ್ರವನ್ನು ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದನ್ನು ಬಿಟ್ಟು ಏಕಾಏಕಿ ಮಾಧ್ಯಮಗಳ ಮುಂದೆ ಹೋಗಿರುವದಕ್ಕೆ ಕಾರಣವಾದರೂ ಏನು? 20 ವರ್ಷ ಆಡಳಿತ ಮಾಡಿರುವ ಅಧ್ಯಕ್ಷರಿಗೆ ಅಲ್ಲಿನ ಎಲ್ಲ ಲೆಕ್ಕ ಪತ್ರಗಳ ಅರಿವು ಇರುವುದಿಲ್ಲವೆ? ಅಧ್ಯಕ್ಷ ಚುನಾವಣೆಯಲ್ಲಿ ಅವರ ವಿರುದಟಛಿ ಸ್ಪರ್ಧಿಸಿರುವದರಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಫಹಿಮುಲ್ಲಾ ಪಲ್ಲಿ ಮಾತನಾಡಿ, ಕಳೆದ ಮಂಗಳವಾರದ ಸಭೆಯಲ್ಲಿ ಲೆಕ್ಕ ಪತ್ರ ಕೇಳಿರುವುದನ್ನೇ ನೆಪ ಮಾಡಿಕೊಂಡು ಅಧ್ಯಕ್ಷರು ಹಾಗೂ ಅವರ ಮಕ್ಕಳು ಏಕಾಏಕಿ ನನ್ನ ಮೇಲೆ ದಾಳಿ ಮಾಡಿ ಗಾಯಗೊಳಸಿದ್ದಾರೆ. ಅಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಹಾಗೂ ನನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದಲ್ಲಿ ಅಧ್ಯಕ್ಷರು ಮತ್ತು ಅವರ ಮಕ್ಕಳೇ ಕಾರಣರಾಗುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net