

ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಮೂಲಸೌಕರ್ಯಗಳ ಹಾನಿಯಾಗಿದ್ದು, ಪುನರ್ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಸೂಚನೆ ನೀಡಿದರು.
ಮಂಗಳವಾರ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಸಾಲಿನ ಮುಂಗಾರು ಮಳೆಯು ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಶೇ. 41 ರಷ್ಟು ಹೆಚ್ಚುವರಿ ಮಳೆ ಉಂಟಾಗಿ ರಸ್ತೆ, ಮೇಲ್ಸೇತುವೆ, ವಿದ್ಯುತ್ಚ್ಛಕ್ತಿ ಕಂಬ, ಟ್ರಾನ್ಸ್ಫಾಮ್ರ್ ಹಾಗೂ ಲೈನ್ಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು ಸೇರಿದಂತೆ ಮತ್ತಿತರ ಹಾನಿಯಿಂದಾಗಿ 183 ಕೋಟಿ ರೂ. ಗಳಷ್ಟು ಅಂದಾಜು ನಷ್ಟ ಉಂಟಾಗಿದೆ. ಇವುಗಳ ಪುನರ್ ನಿಮಾರ್ಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದರು.
ಜಿಲ್ಲಾ ವಿಪತ್ತು ನಿರ್ವಹಣಾ ಕ್ರಮಕ್ಕೆ ಈಗಾಗಲೇ ಪಿ.ಡಿ ಖಾತೆಯಲ್ಲಿ 16.93 ಕೋಟಿ ರಷ್ಟು ಅನುದಾನ ಲಭ್ಯವಿದೆ. ತಾಲೂಕು ಮಟ್ಟದ ತಹಶೀಲ್ದಾರರ ವಿಪತ್ತು ಪಿ.ಡಿ ಖಾತೆಯಲ್ಲಿ 2.61 ಕೋಟಿ ರೂ. ಅನುದಾನ ಲಭ್ಯವಿದ್ದು, ಬರ ನಿರ್ವಹಣೆಗೆ ಸಂಬಂಧಿಸಿದಂತೆ ಅನುದಾನ ಬಳಸಿಕೊಳ್ಳಬಹುದಾಗಿದೆ ಎಂದರು.
ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಭೂಕುಸಿತ ಪ್ರದೇಶಗಳನ್ನು ನಿಖರವಾಗಿ ಗುರುತಿಸಲಾಗಿದೆ. ಮಳೆಗಾಲದಲ್ಲಿ ಪ್ರತಿನಿತ್ಯ ಅಂತಹ ಪ್ರದೇಶಗಳ ಸ್ಥಳಗಳನ್ನು ಪರಿಶೀಲಿಸಬೇಕು. ಭೂಕುಸಿತ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ತಡೆಗೋಡೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಮಳೆಯ ಪ್ರಮಾಣ ಕಳೆದ ನಾಲ್ಕೆ$ದು ದಿನಗಳಿಂದ ಕಡಿಮೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಮಳೆ ಸಂಗ್ರಹಣೆಯಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇದರಿಂದಾಗಿ ಡೆಂಗ್ಯೂ ಉಲ್ಬಣವಾಗುವ ಸಾಧ್ಯತೆಗಳು ಇವೆ. ಸಣ್ಣ ಗೂಡಂಗಡಿಗಳಲ್ಲಿ ಎಳನೀರು ಬೊಂಡ, ಟೀಕಪ್ ಮುಂತಾದವುಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಸಮುದ್ರ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದ ನೀರಿನಲ್ಲಿ ತೈಲ ಅಥವಾ ರಾಸಾಯನಿಕ ಸೋರಿಕೆಯಾಗಿ ಪರಿಸರ ಮಾಲಿನ್ಯ ಸಂರಕ್ಷಿಸಲು ಹಾಗೂ ಅಪಾಯವನ್ನು ಕಡಿಮೆಮಾಡಲು ಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದರು. ಸಹಾಯಕ ಕಮೀಷನರ್ ಮಹೇಶ್ಚಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್, ಪೌರಾಯುಕ್ತ ರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.