ನಂಬಿಕೆ, ಶ್ರದ್ಧೆಯಿಂದ ಸಂಸ್ಕೃತಿ ಉಳಿವು

dharma sabhe
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೆಂಡೆ ಅವರನ್ನು ಸನ್ಮಾನಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಮನೆ, ಶಾಲೆ, ಮೈದಾನ ಮತ್ತು ದೇವಾಲಯಗಳು ನಮ್ಮ ಪುರಾತನ ಸಂಸ್ಕಾರ ಹಾಗೂ ದೇಶ, ಧರ್ಮದ ಬಗ್ಗೆ ನಂಬಿಕೆ ಹಾಗೂ ಶ್ರದ್ಧೆ ನಿರ್ಮಾಣ ಮಾಡುವ ಕೇಂದ್ರ. ಇವುಗಳೆಲ್ಲವೂ ಉಳಿದರೆ ಮಾತ್ರ ನಾವು, ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೆಂಡೆ ಹೇಳಿದರು.

ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನದಲ್ಲಿ ನಿರ್ಮಾಣಗೊಂಡ ಶಿಲಾಮಯ ಮಂದಿರದಲ್ಲಿ ಸಪರಿವಾರ ಶ್ರೀ ಉಮಾಮಹೇಶ್ವರ, ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೇವತೆಗಳ ಪುನಃ ಪ್ರತಿಷ್ಠಾಪನೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಪ್ರಯುಕ್ತ ನಡೆದ ಧರ್ಮಸಭೆ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅತ್ಯಂತ ಪ್ರಾಚೀನ 37 ಸಂಸ್ಕೃತಿಗಳಲ್ಲಿ ಕೇವಲ ಎರಡು ಮಾತ್ರ ಉಳಿದುಕೊಂಡಿದ್ದು, ಉಳಿದೆಲ್ಲವೂ ನಶಿಸಿಹೋಗಿದೆ. ಈ ಎರಡರಲ್ಲಿ ಒಂದಾದ ಚೀನಿ ಸಂಸ್ಕೃತಿಯೂ ಕೂಡ ನಶಿಸುವ ಹಂತದಲ್ಲಿದೆ. ಭಾರತೀಯ ಸಂಸ್ಕೃತಿ ನಮ್ಮ ಹಿರಿಯರ ಕೊಡುಗೆಯಾಗಿದ್ದು, ತಮ್ಮ ಪ್ರಾಣ ಲೆಕ್ಕಿಸದೇ ಸಂಸ್ಕೃತಿ ಕಾಪಾಡಿಕೊಂಡು ಬಂದಿದ್ದಾರೆ ಎಂದರು.

ಹೊನ್ನಾವರ ನವಿಲಗೋಣದ ಆಗಮ ಶ್ರೇಷ್ಠ ಶಂಕರ ಪರಮೇಶ್ವರ ಭಟ್ ಆಶೀರ್ವಚನ ನೀಡಿದರು. ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದೇವಳ ನಿರ್ಮಾಣ ಕಾಮಗಾರಿಯಲ್ಲಿ ದುಡಿದ ಎಲ್ಲರನ್ನು ಗೌರವಿಸಲಾಯಿತು. ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಉಪ್ಪುಂದ, ದೇವಳದ ಟ್ರಸ್ಟಿಗಳಾದ ಜಲಜಾಕ್ಷಿ ಎಂ.ಶೆಟ್ಟಿ, ಸೀತಾರಾಮ ಶೆಟ್ಟಿ, ನಾರಾಯಣ ಎಂ.ಶೆಟ್ಟಿ, ಯು.ಬಿ.ಶೆಟ್ಟಿ, ಭುಜಂಗ ಎಂ.ಶೆಟ್ಟಿ, ಹರೀಶಕುಮಾರ್ ಎಂ.ಶೆಟ್ಟಿ, ನಾಗಯ್ಯ ಶೆಟ್ಟಿ, ಡಾ.ಮಾಧವ ಶೆಟ್ಟಿ, ಹು-ಧಾ ಬಂಟರ ಸಂಘ ಅಧ್ಯಕ್ಷ ವಿಜಯಾನಂದ ಶೆಟ್ಟಿ ಉಪಸ್ಥಿತರಿದ್ದರು.

ಪತ್ರಕರ್ತ ಕೆ.ಸಿ.ರಾಜೇಶ ಕಾರ್ಯಕ್ರಮ ನಿರ್ವಹಿಸಿದರು. ಯು.ಸಂದೇಶ ಭಟ್ ವಂದಿಸಿದರು. ನಂತರ ಯಕ್ಷಗಾನ ತಾಳಮದ್ದಳೆ ಶ್ರೀ ರಾಮಾಂಜನೇಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net