

ಮೈಸೂರು: ಮೈಸೂರು ಪಾರಂಪರಿಕ ನಗರವಾಗಿದ್ದು, ಇಲ್ಲಿನ ಪಾರಂಪರಿಕ ಕಟ್ಟಡಗಳು ಉಳಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ನಗರ ಪಾಲಿಕೆಯು ವರ್ಷಕ್ಕೊಂದು ಪಾರಂಪರಿಕ ಕಟ್ಟಡವನ್ನು ಸಂರಕ್ಷಣೆ ಮಾಡಲು ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಮನವಿ ಮಾಡಿದರು.
ನಗರ ಪಾಲಿಕೆ ಬಜೆಟ್ ಕುರಿತು ಮಾಜಿ ಮೇಯರ್, ಉಪ ಮೇಯರ್‌ಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಸರ್ಕಾರಿ ಅತಿಥಿಗೃಹ ಬಳಿ ಇರುವ ಪಾರಂಪರಿಕ ಸ್ವಾಗತ ಕಮಾನು, ಅದೇ ರೀತಿ ಗ್ರಾಮಾಂತರ ಬಸ್ ನಿಲ್ದಾಣ, ಮಹಾರಾಣಿ ಕಾಲೇಜು, ವೀರನಗೆರೆಯಲ್ಲಿರುವ ಪಾರಂಪರಿಕ ಸ್ವಾಗತ ಕಮಾನು ಸಂರಕ್ಷಣೆ ಹಾಗೂ ಲಲಿತಮಹಲ್ ಅರಮನೆ ಬಳಿ ಇರುವ ಸ್ವಾಗತ ಕಮಾನು ಸ್ಥಳಾಂತರಕ್ಕೆ ಈ ಹಿಂದೆ ತೀರ್ಮಾನಿಸಿ ಅನುದಾನ ಕಾಯ್ದಿರಿಸಲಾಗಿತ್ತು. ಕೂಡಲೇ ಈ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್, ಪಾರಂಪರಿಕ ಸ್ವಾಗತ ಕಮಾನುಗಳ ಸಂರಕ್ಷಣೆಗೆ ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದರು.