

ವಿಜಯಪುರ: ಮೈಸೂರು ಭಾಗದಲ್ಲಿ ವಿಜಯನಗರ ಅರಸರ ಕಾಲದ ಮುಂದುವರಿದ ಮತ್ತು ಪ್ರಾದೇಶಿಕವಾಗಿ ತನ್ನದೆಯಾದ ಸ್ವಲ್ಪ ಭಿನ್ನತೆ ಮೈಗೂಡಿಸಿಕೊಂಡು ನಾಲ್ಕೈದು ಶತಮಾನದ ಚರಿತ್ರೆ ಹೊಂದಿದ ಶೈಲಿಯೇ ಮೈಸೂರು ಸಾಂಪ್ರದಾಯಿಕ ಶೈಲಿ ಎಂದು ಹಿರಿಯ ಕಲಾವಿದ, ಸಿದ್ಧೇಶ್ವರ ಕಲಾಶಾಲೆಯ ನಿವೃತ್ತ ಪ್ರಾಚಾರ್ಯ ಪಿ.ಎಸ್. ಕಡೇಮನಿ ಹೇಳಿದರು.
ನಗರದ ಚಾಣಕ್ಯ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಯ ಕಾರ್ಯಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಗೆ ತನ್ನದೇ ಆದ ವೈಶಿಷ್ಟೃವಿದೆ. ಆಧುನಿಕತೆಯ ಭರಾಟೆಯಲ್ಲಿ ಕಲೆಗಳು ನಶಿಸುತ್ತಿದ್ದು, ಸದ್ಯ ಬೆರಳೆಣಿಯಷ್ಟು ಕಲಾವಿದರೂ ಸಾಂಪ್ರದಾಯಿಕ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲಲಿತ ಕಲಾ ಅಕಾಡೆಮಿಯಿಂದ ನಡೆಯುತ್ತಿರುವ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿದ್ದು, ಯುವ ಪೀಳಿಗೆಯ ಕಲಾವಿದರಿಗೆ ಸಹಾಯವಾಗಲಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಯುವ ಕಲಾವಿದರು ಕಲಾ ವಿದ್ಯಾರ್ಥಿಗಳು ಆಗಮಿಸಿದ್ದು, ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಹೇಳಿದರು.
ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪ್ರಾಧ್ಯಾಪಕ ಡಾ. ವಿಷ್ಣು ಶಿಂದೆ ಮಾತನಾಡಿ, ನಮ್ಮ ನಾಡು ಉತ್ತರ ಮತ್ತು ದಕ್ಷಿಣದಲ್ಲಿ ಪ್ರಾದೇಶಿಕವಾಗಿ ಭಿನ್ನವಾಗಿ ಕಂಡರು ಕೂಡ ಕಲೆ ಮತ್ತು ಭಾಷೆಯಲ್ಲಿ ಆಯಾ ಭಾಗದಲ್ಲಿ ಉತ್ಕೃಷ್ಟವಾಗಿ ಕಂಡುಬರುತ್ತದೆ. ವಿಜಯನಗರ ಅರಸರು ತಮ್ಮಲ್ಲಿ ವಿಜಯನಗರ ಶೈಲಿಯನ್ನು ಬೆಳೆಸಿದರೆ, ಅವರಿಗೆ ಸಾಮಂತರಾಗಿದ್ದ ಮೈಸೂರು ಒಡೆಯರು ತಮ್ಮ ರಾಜ್ಯದಲ್ಲಿ ಅಂದು ಈ ಮೈಸೂರು ಶೈಲಿಯ ಚಿತ್ರಕಲೆಯನ್ನು ಬೆಳೆಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪಿ.ಎಸ್. ಕುಮಾರ ಮಾತನಾಡಿ, ಕಲಾ ವಿದ್ಯಾರ್ಥಿಗಳನ್ನು ಸಹಾಯವಾಗಲು ಕಾರ್ಯಾಗಾರ ಆಯೋಜಿಸಲಾಗಿದೆ. ಕಲಾ ಪ್ರಕಾರಗಳನ್ನು ಪುನರ್ ಬೆಳೆಸುವ ಕಾರ್ಯಗಳು ತುರ್ತಾಗಿ ನಡೆಯಬೇಕು. ಕಲೆಯು ಉಳಿಯಬೇಕಾದರೆ ಯುವ ಕಲಾವಿದರು ತಮ್ಮ ಕಲಾಕೃತಿಗಳಲ್ಲಿ ಈ ರೀತಿಯ ಶೈಲಿಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಟಿ. ಮೇರವಾಡೆ ಕಲೆಯ ಕುರಿತು ಮಾತನಾಡಿದರು. ಅಕಾಡೆಮಿ ರಿಜಿಸ್ಟ್ರಾರ್ ಬಿ. ನೀಲಮ್ಮ ಮತ್ತು ಅಕಾಡೆಮಿ ಸದಸ್ಯೆ ರಾಜೇಶ್ವರಿ ಮೋಪಗಾರ ಮಾತನಾಡಿದರು. ಮೈಸೂರು ಸಾಂಪ್ರದಾಯಿಕ ಶೈಲಿಯ ಖ್ಯಾತಿಯ ರಾಜ್ಯದ ಯುವ ಕಲಾವಿದ ಎಚ್.ಎನ್. ರವೀಶ್ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಲಲಿತಕಲಾ ಅಕಾಡೆಮಿ ಸದಸ್ಯ ವೆಂಕಟೇಶ ಬಡಿಗೇರ, ಕಲಾವಿದ ಬಾಬುರಾವ್ ನಡೋಣಿ, ಅಕಾಡೆಮಿಯ ಬೆಳಗಾವಿ ಜಿಲ್ಲೆಯ ಸದಸ್ಯೆ ಆಶಾ ನಡೋಣಿ, ರಮೇಶ ಚವಾಣ, ವಿದ್ಯಾಧರ ಸಾಲಿ ಮತ್ತಿತರರಿದ್ದರು.