

ಭರತ ನಾಟ್ಯ, ಸಂಗೀತ ಸೇರಿದಂತೆ ನಾನಾ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಹೇಳಿದರು.
ಶಾಂಭವಿ ಸ್ಕೂಲ್ ಆಫ್ ಡಾನ್ಸ್ ವತಿಯಿಂದ ರಾಮಕೃಷ್ಣ ನಗರದ ನಟನ ರಂಗ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಮೂಲಂ-2023’ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಂಸ್ಕೃತಿಕ ಕಲೆಗಳ ಉಳಿವಿಗೆ ನಟನ ರಂಗ ಶಾಲೆಯಲ್ಲಿ ನಡೆಯುತ್ತಿರುವ ಇಂತಹ ವಿಚಾರ ಸಂಕಿರಣ, ನೃತ್ಯೋತ್ಸವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕಿದೆ. ಇಂತಹ ಕಾರ್ಯಕ್ರಮಗಳಿಂದ ಕಲೆಗೆ ಪ್ರೋತ್ಸಾಹ ನೀಡಬಹುದು. ಜತೆಗೆ ಹೊಸ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೂ ಅವಕಾಶ ನೀಡಬಹುದಾಗಿದೆ ಎಂದರು.
ನೃತ್ಯಾಲಯ ಟ್ರಸ್ಟ್ ನಿರ್ದೇಶಕಿ ಡಾ.ತುಳಸಿ ರಾಮಚಂದ್ರ, ಕಲಾವಿದರಾದ ವೈಜಯಂತಿ ಕಾಶಿ, ಗೀತಾ ಚಂದ್ರನ್ ಇದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ನೃತ್ಯ, ಸಂಗೀತ, ರಂಗಭೂಮಿಯಲ್ಲಿ ಗುರು-ಶಿಷ್ಯರ ನಡುವಿನ ಅನುಬಂಧ, ಪರಂಪರೆ, ತಲೆಮಾರುಗಳ ನಡುವಿನ ವ್ಯತ್ಯಾಸ, ಬೆಳವಣಿಗೆ ಪ್ರಸ್ತುತಿ ಮೊದಲಾದ ವಿಚಾರ ಕುರಿತು ವಿಚಾರಸಂಕಿರಣದ ಜತೆಗೆ ನೃತ್ಯ ಕಾರ್ಯಕ್ರಮವೂ ನೆರವೇರಿತು.