

ಕೂಡಲಸಂಗಮ: ಪ್ರಾಚೀನ ಇತಿಹಾಸಕ್ಕೆ ಹೆಸರಾದ ನಮ್ಮ ಭಾರತ ದೇಶದಲ್ಲಿನ ಕಲೆ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ಸುಕ್ಷೇತ್ರದ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಪ್ರವಾಸೋದ್ಯಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ದೇಶದ ಸಾಕಷ್ಟು ಜನ ಅಧ್ಯಯನಕ್ಕಾಗಿ ನಮ್ಮ ಭಾರತಕ್ಕೆ ಬರುತ್ತಾರೆ. ವಿದೇಶಕ್ಕೂ ನಾನು ಹೋಗಿಬಂದಿದ್ದು, ಅಲ್ಲಿ ಕೇವಲ ಉತ್ತಮ ರಸ್ತೆ, ಉದ್ಯಾನ ಮಾತ್ರ ನೋಡಬಹುದೇ ಹೊರತು ಐಹೊಳೆ, ಪಟ್ಟದಕಲ್ಲಿನಂತಹ ಸ್ಮಾರಕಗಳು ವೀಕ್ಷಣೆಗೆ ಸಿಗಲ್ಲ ಎಂದರು.
ವಿಜಯಪುರದಲ್ಲಿ ಗೋಳಗುಮ್ಮಟ ಎಂಬ ಅದ್ಭುತ ಕಟ್ಟಡ ಕಾಣಬಹುದು. ಇಂತಹ ಬೃಹತ್ ಕಟ್ಟಡಗಳನ್ನು ಅಂದಿನ ಕಾಲದಲ್ಲಿ ಸಿಮೆಂಟ್, ಕಬ್ಬಿಣವಿಲ್ಲದೆ ನಿರ್ಮಿಸಿದ್ದಾರೆ. ಬಾದಾಮಿ ಗುಹಾಂತರ ದೇವಾಲಯಗಳನ್ನು ಒಂದೇ ಶಿಲೆಯಲ್ಲಿ ಕೆತ್ತನೆ ಮಾಡಿದ್ದಾರೆ. ಇಂತಹ ಕಲೆಯ ಅಧ್ಯಯನಕ್ಕೆ ಲಕ್ಷಾನುಗಟ್ಟಲೇ ಖರ್ಚು ಮಾಡಿಕೊಂಡು ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಹಿಂದೆ ನಮ್ಮ ದೇಶ ಆಳಿದವರು ಅವುಗಳನ್ನು ಒಡೆದುಹಾಕಿದ್ದಾರೆ. ಅಂತಹ ಶಿಲ್ಪಗಳನ್ನು ಮತ್ತೆ ಮಾಡಲು ಸಾಧ್ಯವಿಲ್ಲ. ಸುಂದರ ಸಂಸ್ಕೃತಿ ಹೊಂದಿದ ದೇಶ ನಮ್ಮದಾಗಿದ್ದು ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಶಿಶಿಧರ ಕುರೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೂಡಲಸಂಗಮದ ಇನ್ನಷ್ಟು ಅಭಿವೃದ್ಧಿಗೆ ಪ್ರಾಧಿಕಾರದ ಆಯುಕ್ತರೊಂದಿಗೆ ಚರ್ಚಿಸಿ ಇಲ್ಲಿಯ ಪರಿಸರ ಬಳಸಿಕೊಂಡು ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಐತಿಹಾಸಿಕ ತಾಣದಲ್ಲಿ ಅನುಕೂಲಕರವಾದ ವಾತಾವರಣ ಸೃಷ್ಟಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಪ್ರಾಧ್ಯಾಪಕ ಜಿ.ಜಿ. ಹಿರೇಮಠ ವಿಶೇಷ ಉಪನ್ಯಾಸ ನೀಡಿದರು.
ಗ್ರಾಪಂ ಅಧ್ಯಕ್ಷೆ ಗಂಗಮ್ಮ ರಾಂಪೂರ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಗೋಪಾಲ ಹಿತ್ತಲಮನಿ, ಮುಖಂಡರಾದ ಗಂಗಣ್ಣ ಬಾಗೇವಾಡಿ, ಪ್ರಭು ಹಿರೇಮಠ ಇತರರಿದ್ದರು.
ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ, ರಂಗೋಲಿ ಸ್ಪಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ವಿತರಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರವಾಸಿ ಮಾರ್ಗದರ್ಶಿಗಳಾದ ಪ್ರಸನ್ನ ಮುಗಳಿ, ಮುನೀರಾಬಾನು, ಬಿ.ಎಚ್. ಚಂದ್ರಗಿರಿ ಅವರನ್ನು ಸನ್ಮಾನಿಸಲಾಯಿತು.