ಪುರಾತನ ದೇಗುಲಗಳ ಸಂರಕ್ಷಿಸಿ

SRP_18-03jpg
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದ ಶ್ರೀರಂಗ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ಇತಿಹಾಸ ತಜ್ಞ ತೈಲೂರು ವೆಂಕಟಕೃಷ್ಣ ಉದ್ಘಾಟಿಸಿದರು. ಕರ್ನಾಟಕ ಸಂಘದ ಪ್ರೊ.ಬಿ.ಜಯಪ್ರಕಾಶ್‌ಗೌಡ ಡಾ.ಸುಜಯ್‌ಕುಮಾರ್, ಡಿ.ಎನ್.ಲೋಕೇಶ್, ಪೈ.ಮುಕುಂದ ಇದ್ದರು.
Published on

ಶ್ರೀರಂಗಪಟ್ಟಣ: ಐತಿಹಾಸಿಕತೆಗೆ ಶ್ರೀರಂಗಪಟ್ಟಣವೇ ಒಂದು ಸ್ಮಾರಕವಾಗಿದ್ದು, ಈ ಪಾರಂಪರಿಕ ಬೀಡಿನಲ್ಲಿರುವ ಕೋಟೆ, ಕೊತ್ತಲು, ಅಳಿದು ಉಳಿದುಕೊಂಡಿರುವ ಪುರಾತನ ದೇಗುಲಗಳ ಸಂರಕ್ಷಣೆಯಾಗಬೇಕಿದೆ ಎಂದು ಇತಿಹಾಸ ತಜ್ಞ ಹಾಗೂ ಸಾಹಿತಿ ತೈಲೂರು ವೆಂಕಟಕೃಷ್ಣ ತಿಳಿಸಿದರು.

ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಬುಧವಾರ ಶ್ರೀರಂಗ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀರಂಗಪಟ್ಟಣದ ಸ್ಮಾರಕಗಳು ಸರಂಕ್ಷಣೆಯಾದರೆ ನಾಡು ಹಾಗೂ ಅಂದಿನ ಜನ ಜೀವನದ ಇತಿಹಾಸವನ್ನು ನಾವೂ ಮುಂದಿನ ಪೀಳಿಗೆಯ ಜನರಿಗೆ ಹೇಳಬಹುದು. ಸ್ಮಾರಕಗಳೆಂದರೆ ದೇವಾಲಗಳಷ್ಟೇ ಮಾತ್ರವಲ್ಲ ನಮ್ಮಲ್ಲಿರುವ ಕೆರೆ-ಕಟ್ಟೆಗಳು ಕೂಡ ಆಗಿವೆ. ಅವುಗಳ ರಕ್ಷಣೆ ಪ್ರಮುಖ. ರಾಜ ಒಡೆಯರ್ ಅವರಿಂದ ಆರಂಭವಾಗಿ ಕಂಠೀರವ ನರಸಿಂಹರಾಜ ಒಡೆಯರ್ ಅವರು ನಡೆಸಿಕೊಟ್ಟ ಶ್ರೀರಂಗಪಟ್ಟಣದ ದಸರಾ ಆಡಂಬರದ ದಸರಾ ಅಚರಣೆಯಾಗಿರದೆ ಜನಸಾಮಾನ್ಯರ ದಸರಾವಾಗಿತ್ತು. ನಾವು ನೆಲೆಸಿರುವ ಊರು ಹಾಗೂ ಇಲ್ಲಿನ ಮಹತ್ವಪೂರ್ಣ ವಿಷಯಗಳು, ನಮ್ಮಲ್ಲಿ ನಡೆದುಬಂದ ಆಚರಣೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯುವ ಕೆಲಸವಾಗಬೇಕಿದೆ. ಆದರೆ ಇಂದಿನ ದಸರಾ ಕೇವಲ ಮನರಂಜನೆಯ ದಸರಾವಾಗಿದೆ ಎಂದು ಬೇಸರಿಸಿದರು.

ಸಾಹಿತಿ ಹರವು ದೇವೇಗೌಡ ಮಾತನಾಡಿ, ಜಿಲ್ಲೆಯ ಜನರ ಸಾಂಸ್ಕೃತಿಕ ಬದುಕಿಗೆ ಅಡಿಗಲ್ಲು ಇರುವುದೇ ಶ್ರೀರಂಗಪಟ್ಟಣದಲ್ಲಿ. ತಲಕಾಡಿನ ಗಂಗರಿಂದ ಪ್ರಾರಂಭವಾದ ಈ ಸಾಂಸ್ಕೃತಿಕ ಅಡಿಪಾಯ ಹೊಯ್ಸಳರು, ವಿಜಯನಗರ, ಮೈಸೂರು ಅರಸರ ಕಾಲದಲ್ಲಿ ಉತ್ತುಂಗದಲ್ಲಿತ್ತು. ನಾಡು ಹಾಗೂ ಜಿಲ್ಲೆಯ ಸ್ಮಾರಕ ರಕ್ಷಿತ ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿ, ದೇವಾಲಯಗಳ ಸಂರಕ್ಷಣೆ ಕಾರ್ಯ ಮುಂದುವರಿಯಲಿ. ಶಾಸನಗಳಿಂದ ಸ್ಮಾರಕಗಳ ಇತಿಹಾಸ ತಿಳಿಯುತ್ತದೆ. ಶಾಸನ ಹಾಗೂ ಸ್ಮಾರಕಗಳ ಬಗ್ಗೆ ಶ್ರೀಸಾಮಾನ್ಯರಿಗೆ ಮಾಹಿತಿ ನೀಡಿ ಅದರ ಮಹತ್ವ ತಿಳಿಸಿ. ಆಗ ಸ್ಥಳೀಯರ ಸಹಕಾರದಿಂದ ಸ್ಮಾರಕಗಳು ರಕ್ಷಣೆಯೂ ಆಗಲಿವೆ ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಹಲವು ಸಾಹಿತಿಗಳು, ಕವಿಗಳು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದರು. ಪ್ರೊ.ಬಿ.ಜಯಪ್ರಕಾಶ್‌ಗೌಡ, ಹಿರಿಯ ಗಾಂಧಿವಾದಿ ಡಾ.ಸುಜಯ್‌ಕುಮಾರ್, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಿ.ಎನ್.ಲೋಕೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಖಾಲಿ ಕುರ್ಚಿಗಳ ದರ್ಬಾರ್!: ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಶ್ರೀರಂಗ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಸಾಹಿತ್ಯ ಆಸಕ್ತರೇ ಇಲ್ಲದೆ ಖುರ್ಚಿಗಳು ಖಾಲಿಯಾಗಿ ಬಣಗುಡುತ್ತಿದ್ದವು. ಇತ್ತ ವೇದಿಕೆ ಮೇಲೆ ನಡೆವ ಗೋಷ್ಠಿಗೆ ನಾ ಮುಂದು ತಾ ಮುಂದು ಎಂದು ಆಹ್ವಾನ ಪತ್ರಿಕೆ ಮತ್ತು ಪದಾಧಿಕಾರಿಗಳು ಅಲ್ಲದವರೂ ವೇದಿಕೆ ಹಂಚಿಕೊಂಡಿದ್ದು ಒಂದು ರೀತಿಯ ಅಭಾಸಕ್ಕೆ ಕಾರಣವಾಯಿತು. ಅಂತಿಮವಾಗಿ ವೇದಿಕೆ ಮೇಲಿದ್ದ ತುಂಬಿ ತುಳುಕುತ್ತಿದ್ದ ಗಣ್ಯರು ಖಾಲಿ ಖುರ್ಚಿಗಳೇ ಹೆಚ್ಚಾಗಿ ಕಾಣುತ್ತಿದ್ದದ್ದರ ನಡುವೆಯೇ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net