

ಬಾದಾಮಿ: ಸ್ಮಾರಕಗಳ ಸಂರಕ್ಷಣೆ ಇಲಾಖೆಗೆ ಸೀಮಿತವಾಗಿಲ್ಲ. ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮೈಸೂರು ವಿವಿ ನಿವೃತ್ತ ಉಪನ್ಯಾಸಕ ಡಾ. ಎಂ.ಎಸ್. ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ಪಟ್ಟದಕಲ್ಲಿನ ದೇವಾಲಯಗಳ ಸಮುಚ್ಛಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಆಯೋಜಿಸಿದ್ದ ವಿಶ್ವ ಪರಂಪರೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ಚಾಲುಕ್ಯರು ತಮ್ಮ ಆಡಳಿತದ ಅವಧಿಯಲ್ಲಿ ನಾಗರ, ದ್ರಾವಿಡ, ವೇಸರ ಶಿಖರಗಳ ದೇವಾಲಯಗಳನ್ನು ಪರಂಪರೆಯಾಗಿಸಿದ್ದರು. ಇವುಗಳು ಒಂದೆ ಸಮೂಹದಲ್ಲಿ ಕಾಣಸಿಗುವುದು ಪಟ್ಟದಕಲ್ಲಿನಲ್ಲಿ ಮಾತ್ರ. ಇದರಿಂದ ಪಟ್ಟದಕಲ್ಲು ವಿಶ್ವ ಪರಂಪರೆ ತಾಣವಾಗಿದೆ. ಇಲಾಖೆಯ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಶಿಸ್ತು ಮತ್ತು ಸ್ವಚ್ಛತೆಯಲ್ಲಿ ಬರುವ ಪ್ರವಾಸಿಗರಿಗೆ ಉತ್ತಮ ವಾತವಾರಣ ಮೂಡಿಸಿದ್ದು ಗಮನಾರ್ಹ.ಇವುಗಳ ವೈಭವವನ್ನು ನಾವೆಲ್ಲ ಸಂಭ್ರಮಿಸುತ್ತ ಮುಂದಿನ ಪೀಳಿಗೆಗೆ ಕೊಡಮಾಡಬೇಕು ಎಂದರು.
ಧಾರವಾಡ ಕೆಸಿಡಿ ನಿವೃತ್ತ ರಜಿಸ್ಟ್ರಾರ್ ಡಾ. ಎಸ್. ರಾಜಶೇಖರ ಛಾಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ನಾವು ಅಧ್ಯಯನ ಮಾಡುವಾಗ ದೇವಾಲಯಗಳಲ್ಲಿ ಅಭಿವೃದ್ಧಿ ರಹಿತವಾಗಿ ಹಾಗೂ ಅಶ್ವಚ್ಛತೆ ಕಾಣುತ್ತಿತ್ತು. ಆದರೆ, ಇಂದು ಪ್ರವಾಸಿ ತಾಣಗಳು ಶಿಲ್ಪಕಲೆ ತಿಳಿಸುವ ಪರಂಪರೆಯನ್ನು ನಾವೆಲ್ಲ ಗೌರವಿಸುವ ಜತೆಗೆ ಸಂರಕ್ಷಣೆ ಒದಗಿಸುವಲ್ಲಿ ಶ್ರಮಿಸಬೇಕಿದೆ. ಇದರಿಂದ ಈ ನಾಡಿನ ಗೌರವ ಹೆಚ್ಚಿಸುತ್ತದೆ ಎಂದರು.
ಚಾಲುಕ್ಯರ ಸ್ಮಾರಕಗಳ ಅಧ್ಯಯನದಲ್ಲಿ ಬಹಳಷ್ಟು ಆಳವಾದ ವಿಷಯಗಳಿವೆ. ಇಂದಿನ ವಿದ್ಯಾರ್ಥಿಗಳು ಪ್ರವಾಸಿ ತಾಣ ಮತ್ತು ಸ್ಮಾರಕಗಳ ಅಡಿಯಲ್ಲಿಯೇ ಸಾಕಷ್ಟು ಅಧ್ಯಯನ ಮಾಡುವ ಮೂಲಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು. ಪಟ್ಟದಕಲ್ಲಿನ ಸ್ಮಾರಕಗಳು ಕೇವಲ ದೇಶಕ್ಕೆ ಸೀಮಿತವಿಲ್ಲ. ಇದು ಜಗತ್ತಿನ ಮಾನವನ ಬದುಕು ಒಳಗೊಂಡಿರುವ ಅತ್ಯದ್ಭುತ ಶಿಲ್ಪಕಲೆ ಸೊಬಗಿನ ಸಮೂಹವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಎಸ್‌ಐ ನಿವೃತ್ತ ಪ್ರಾದೇಶಿಕ ನಿರ್ದೇಶಕ ಡಾ. ಎಸ್.ವಿ. ವೆಂಕಟೇಶಯ್ಯ ಮಾತನಾಡಿ, ಧಾರವಾಡ ವಲಯದಲ್ಲಿ ನಾನು ಅಧಿಕಾರಿಯಾಗಿದ್ದಾಗ ಮೂರು ಪ್ರವಾಸಿ ತಾಣಗಳಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ರಾಷ್ಟ್ರಕೂಟರ ಕುರಿತು ಅಧ್ಯಯನ ಮಾಡುವಾಗ ನನ್ನ ಗುರು ಡಾ. ಎಂ.ಎಸ್. ಕೃಷ್ಣಮೂರ್ತಿ ಅವರೊಂದಿಗೆ ಈ ಭಾಗದಲ್ಲಿ ಸಂಚರಿಸಿ ಅಧ್ಯಯನ ಮಾಡಿದ್ದರ ಲವಾಗಿ ಇಲ್ಲಿ ಕೆಲಸ ಮಾಡುವ ಅವಕಾಶ ದೊರಕಿತ್ತು. ಯುವ ಜನತೆ ಇತಿಹಾಸ ಅಧ್ಯಯನದ ಮೂಲಕ ಅರಿತು ಉದ್ಯೋಗಿಗಳಾಗುವ ಜತೆಗೆ ಪ್ರವಾಸೋದ್ಯಮ ಬೆಳೆಸಲು ಸಹಕರಿಸಬೇಕು ಎಂದರು.
ಭಾರತೀಯ ಪುರಾತತ್ವ ಇಲಾಖೆಯ ಧಾರವಾಡ ವಲಯ ಎಸ್.ಎ. ಅಧಿಕಾರಿ ರಮೇಶ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತಾನಡಿದರು. ಎಸ್.ಬಿ.ಎಂ. ಪದವಿ ಕಾಲೇಜಿನ ಉಪನ್ಯಾಸಕ ಎಸ್.ಎಸ್. ದೊಡಮನಿ, ಶ್ರಿಗುರು ಭಾಗಿ ಮತ್ತಿತರರಿದ್ದರು. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ದೇವರಾಜ ಸ್ವಾಗತಿಸಿ ವಂದಿಸಿದರು.