

ರಾಯಚೂರು: ನಮ್ಮ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮುಟ್ಟಿಸುವುದು ನಮ್ಮೆಲ್ಲ ಹೊಣೆಗಾರಿಕೆಯಾಗಿದ್ದು, ಈ ನಿಟ್ಟಿನಲ್ಲಿ ಮುನ್ನೂರು ಕಾಪು ಸಮಾಜ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸಲು ಪ್ರಯತ್ನಿಸುತ್ತಿದೆ ಎಂದು ಐಎಂಎ ದಂತ ವೈದ್ಯ ಕಾಲೇಜು ಅಧ್ಯಕ್ಷ ಗಧಾರ ಬೆಟ್ಟಪ್ಪ ಹೇಳಿದರು.
ಸ್ಥಳೀಯ ಲಕ್ಷ್ಮಮ್ಮ ದೇವಿ ದೇವಸ್ಥಾನದಲ್ಲಿ ಮುನ್ನೂರು ಕಾಪು ಸಮಾಜದಿಂದ ಹಮ್ಮಿಕೊಂಡಿರುವ ನವರಾತ್ರಿ ಉತ್ಸವ ಕಾರ್ಯಕ್ರಮವನ್ನು ಭಾನುವಾರ ಸಂಜೆ ಉದ್ಘಾಟಿಸಿ ಮಾತನಾಡಿ, ಮುಂಗಾರು ಹಬ್ಬ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿರುವ ಸಮಾಜ ಇತರರಿಗೆ ಮಾದರಿಯಾಗಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ ಮಾತನಾಡಿ, ನವರಾತ್ರಿ ಉತ್ಸವ ಮೂಲಕ ಸಮಾಜದಿಂದ ಕಲಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ನಶಿಸಿ ಹೋಗುತ್ತಿರುವ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಣೆ ಮಾಡುವುದರಲ್ಲಿ ಮುನ್ನೂರು ಕಾಪು ಸಮಾಜ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ನಂತರ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪದಾಕಾರಿಗಳಾದ ಜಿ.ಬಸವರಾಜ ರೆಡ್ಡಿ, ಕೃಷ್ಣಮೂರ್ತಿ, ಬಂಗಿ ನರಸರೆಡ್ಡಿ, ಪಿ.ನರಸರೆಡ್ಡಿ, ಎನ್.ಶ್ರೀನಿವಾಸರೆಡಡಿ, ಮಹೇಂದ್ರರೆಡ್ಡಿ, ಯು.ಗೋವಿಂದರೆಡ್ಡಿ, ಮುಖಂಡರಾದ ಕೊಂಡಾ ಕೃಷ್ಣಮೂರ್ತಿ, ರಾಮಣ್ಣ ಹವಳೆ ಉಪಸ್ಥಿತರಿದ್ದರು.