

ಮಂಡ್ಯ: ಪ್ರಾಚೀನ ಕಾಲದಲ್ಲಿ ನಿರ್ಮಾಣವಾದ ಹಲವು ಸ್ಮಾರಕ, ಗುಡಿ, ಕೆರೆ ಕಟ್ಟೆ ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದದ್ದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ಪುರಾತತ್ವ ಇಲಾಖೆ ಮಾಜಿ ನಿರ್ದೇಶಕ ಡಾ.ಎಚ್.ಎಂ.ಸಿದ್ದಣ್ಣಗೌಡರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪಾರಂಪರಿಕ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವ ಹಾಗೂ ಉದ್ಯಾನ ನಿರ್ಮಾಣ ಕಾಮಗಾರಿ ಅನುಷ್ಠಾನ ಕುರಿತು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಹೊಸತನದ ಆವೇಶದಲ್ಲಿ ಪ್ರಾಚೀನ ಸ್ಮಾರಕ, ಕಟ್ಟಡ ಅವಶೇಷಗಳನ್ನು ನಾಶವಾಗಲು ಬಿಡಬಾರದು. ಹಿಂದಿನ ಇತಿಹಾಸ ಗೊತ್ತಿಲ್ಲದೆ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪುರಾತನ ಜ್ಞಾನದ ಪ್ರಜ್ಞೆ ಪ್ರತಿಯೊಬ್ಬರಿಗೂ ಇರಬೇಕೆಂಬ ಉದ್ದೇಶದಿಂದ ಪ್ರಾಚೀನ ಸ್ಮಾರಕಗಳನ್ನು ಉಳಿಸಲು ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಭಾರತೀಯ ಪುರಾತತ್ವ ಇಲಾಖೆ ಭಾರತೀಯ ಸರ್ಕಾರಿ ಸಂಸ್ಥೆಯಾಗಿದ್ದು, ಇದು ಪುರಾತನ ಸಂಶೋಧನಾ ಮತ್ತು ದೇಶದಲ್ಲಿನ ಸಾಂಸ್ಕೃತಿಕ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಕಾರಣವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಐತಿಹಾಸಿಕ ಸ್ಮಾರಕಗಳು ದೇಶದ ಅಮೂಲ್ಯ ಆಸ್ತಿ. ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಹೊಯ್ಸಳ ಕಾಲದ ದೇವಾಲಯ, ಶಾಸನ, ವೀರಗಲ್ಲು, ಶಿಲ್ಪಕಲೆ, ಕಲ್ಯಾಣಿ ಹಾಗೂ ಗುಹೆಗಳು ಇದ್ದು, ಅವುಗಳ ಸಂರಕ್ಷಣೆ ಕೆಲಸವಾಗಬೇಕಿದೆ. ಪ್ರಮುಖವಾಗಿ ರಕ್ಷಣೆ ಮಾಡುವಾಗ ಸ್ಮಾರಕಗಳಿಗೆ ಧಕ್ಕೆಯಾಗಬಾರದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜಿವಪ್ಪ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಂಗಸ್ವಾಮಿ, ಸಂಪನ್ಮೂಲ ವ್ಯಕ್ತಿ ಸ್ವಾಮಿನಾಥನ್ ಇತರರಿದ್ದರು.