ಮಹಿಳೆಯರ ಸಬಲೀಕರಣಕ್ಕಾಗಿ ಹಕ್ಕೊತ್ತಾಯ ಮಂಡನೆ

cnc
Published on

ಮಡಿಕೇರಿ: ವಿಶ್ವರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಕ್ಕೊತ್ತಾಯ ಮಂಡಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ವಿವಿಧ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ವಿಶ್ವರಾಷ್ಟ್ರ ಸಂಸ್ಥೆಯ ಮಹಾ ಕಾರ್ಯದರ್ಶಿ, ಜಾಗತಿಕ ಮಹಿಳಾ ಸಬಲೀಕರಣದ ಕಾರ್ಯಾಂಗ ನಿರ್ದೇಶಕರು, ಯುನೆಸ್ಕೋದ ಮಹಾ ನಿರ್ದೇಶಕರು, ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು, ಮಹಿಳೆಯರ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಲಿಂಗ ಪಕ್ಷಪಾತ, ತಾರತಮ್ಯವನ್ನು ಕೊನೆಗೊಳಿಸಲು ಮತ್ತು ಲಿಂಗ ಸಮಾನತೆಯನ್ನು ಸಾಧಿಸುವ ಪ್ರಯತ್ನಗಳನ್ನು ಪ್ರೇರೇಪಿಸಲು ಇದು ಸಹಕಾರಿಯಾಗಿದೆ ಎಂದರು.

ಫಾರ್ ಆಲ್ ವುಮೆನ್ ಅಂಡ್ ಗರ್ಲ್ಸ್, ರೈಟ್ಸ್, ಇಕ್ವಾಲಿಟಿ, ಎಂಪವರ್ ಮೆಂಟ್ ಎಂಬ ಥೀಮ್‌ನಡಿಯಲ್ಲಿ ಸಿಎನ್‌ಸಿ ಹಕ್ಕೊತ್ತಾಯಗಳ ಪರಿಗಣನೆಯು ಕೊಡವ ಮಹಿಳೆಯರ ಪಾಲಿನ ನಿಜವಾದ ಗೌರವವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕೊಡವ ಮಹಿಳೆಯರಲ್ಲಿ ಅಂತರ್ಗತವಾಗಿರುವ ಗುಣವನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಮತ್ತು ಅಳವಡಿಸಿಕೊಂಡರೆ ದೇಶದಲ್ಲಿ ಮಹಿಳೆಯರು ಯಾವುದೇ ಶೋಷಣೆ, ದೌರ್ಜನ್ಯ ಮತ್ತು ಗುಲಾಮಗಿರಿಯಿಂದ ಹೊರಬರಬಹುದು. ಕೊಡವ ಮಹಿಳೆಯರು ಬುದ್ಧಿವಂತಿಕೆ ಮತ್ತು ಉದಾರತೆಗೆ ಮಾದರಿಯಾಗಿದ್ದಾರೆ ಎಂದರು.

ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸಂವಿಧಾನದತ್ತವಾದ ಹಕ್ಕುಗಳನ್ನು ನೀಡಬೇಕು. ಸ್ವಾಯತ್ತ ಕೊಡವ ಲ್ಯಾಂಡ್ ಘೋಷಿಸಬೇಕು. ನೆಲ, ಜಲ, ಭಾಷೆ, ಸಂಸ್ಕೃತಿ, ಪರಪಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯದೊಂದಿಗೆ ಸಾಂವಿಧಾನಿಕ ಭದ್ರತೆಯನ್ನು ಖಾತ್ರಿ ಪಡಿಸಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕು. ಕೊಡವರ ಜನ್ಮಸಿದ್ಧ ಹಕ್ಕಾಗಿರುವ ಕೋವಿ ಹೊಂದುವ ವಿನಾಯಿತಿಯನ್ನು ಶಾಶ್ವತಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತಾ ಗಿರೀಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ರೇಖಾ ನಾಚಪ್ಪ, ಅಪ್ಪಚ್ಚಿರ ರೀನಾ ರಮ್ಮಿ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಅರೆಯಡ ಸವಿತಾ ಗಿರೀಶ್, ಮುದ್ದಿಯಡ ಲೀಲಾವತಿ, ಚೋಳಪಂಡ ಜ್ಯೋತಿ ನಾಣಯ್ಯ, ನಂದಿನೆರವಂಡ ನಿಶಾ ಅಚ್ಚಯ್ಯ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net