

ಮಂಡ್ಯ: ಕಲಿಗಾಲದ ಜನರಲ್ಲಿ ಅಹಂಕಾರ, ಸ್ವಾರ್ಥ, ದರ್ಪ ಗುಣಗಳು ಹೆಚ್ಚುತ್ತಿದೆ ಎಂದು ಕೈವಾರ ಯೋಗಿನಾರೇಯಣ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಡ್ಯ ವಿಶ್ವವಿದ್ಯಾಲಯ, ಯೋಗಿನಾರೇಯಣಯತೀಂದ್ರ ಪ್ರಚಾರ ಸಭಾ ವತಿಯಿಂದ ಆಯೋಜಿಸಿದ್ದ ಕೈವಾರ ಸದ್ಗುರು ನಾರೇಯಣಯೋಗಿಗಳ ಪರಿಚಯ, ಆತ್ಮಬೋಧೆ ಹಾಗೂ ಯತೀಂದ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಕೈವಾರ ತಾತಯ್ಯ ಅವರ ಕಾಲಜ್ಞಾನದಂತೆ ಪ್ರಪಂಚ ಅಂತ್ಯವಾಗುವುದು ನಿಶ್ಚಿತ. ಆದರೆ, ಪ್ರಳಯದ ನಂತರವೂ ಮನುಷ್ಯ ಸಂಕುಲ ಉಳಿಯಬೇಕಾದರೆ ತಾತಯ್ಯ ಅವರು ನೀಡಿರುವ ಪಂಚಾಕ್ಷರ ಕವಚದ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು ಎಂದರು.
ದೇವತೆಗಳು ಅಮೃತ ಕುಡಿದು ಚಿರಂಜೀವಿಗಳಾಗಿದ್ದರೂ ಅವರು ಶಾಶ್ವತವಲ್ಲ. ಒಮ್ಮೆ ಅವರು ಅಮೃತ ಸೇವಿಸಿದ ಆನಂದದಲ್ಲಿ ಅಹಂಕಾರದಿಂದ ಮೆರೆಯುವಾಗ ಅವರಿಗೂ ಸಂಕಷ್ಟ ಎದುರಾಯಿತು. ಸಂಕಷ್ಟದಿಂದ ರಕ್ಷಿಸಿಕೊಳ್ಳಲು ಋಷಿಮುನಿ ವಿಶ್ವರೂಪ ದೇವತೆಗಳಿಗೆ ಓಂ ನಮೋ ನಾರಾಯಣಾಯ ಅಷ್ಟಾಕ್ಷರ ಕವಚ ನೀಡಿದರು. ಮಂತ್ರ ಕವಚದಿಂದ ದೇವತೆಗಳು ತಮ್ಮನ್ನು ರಕ್ಷಣೆ ಮಾಡಿಕೊಂಡರು ಎಂದರು.
ಯೋಗಿನಾರೇಯಣ ಯತೀಂದ್ರ ಪ್ರಚಾರ ಸಭಾ ಪ್ರಧಾನ ಸಂಚಾಲಕ ಎಚ್.ಎ.ವೆಂಕಟೇಶ್ ಮಾತನಾಡಿ, ಕೈವಾರ ಯೋಗಿನಾರೇಯಣರ ತತ್ವಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಪ್ರಚಾರ ಸಭಾ ರಚಿಸಲಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ಮೈಸೂರಿನಲ್ಲಿ ಕಾರ್ಯಕ್ರಮ ಆರಂಭಿಸಲಾಯತು. ಈ ಬಾರಿ ಮಂಡ್ಯದಲ್ಲಿ ಕಾರ್ಯಕ್ರಮ ನಡೆಸಲಾಗಿದ್ದು ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸಮೂರ್ತಿ, ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಮಾನವ ಸಂಪನ್ಮೂಲ ಅತ್ಯಂತ ಅವಶ್ಯಕವಾಗಿದೆ. ಹೆಚ್ಚು ವಿದ್ಯಾವಂತರಾದ ಜನರು ಆ ದೇಶದ ಖನಿಜ ಸಂಪತ್ತಿಗಿಂತಲೂ ಅತ್ಯಮೂಲ್ಯ. ಹಾಂಕಾಂಗ್, ಜಪಾನ್‌ನಲ್ಲಿ ಅಷ್ಟೇನೂ ಖನಿಜ ಸಂಪನ್ಮೂಲವಿಲ್ಲ, ಆದರೂ ಆ ದೇಶಗಳು ಪ್ರಗತಿ ಹೊಂದುತ್ತಿವೆ. ಇದಕ್ಕೆ ಅಲ್ಲಿಯ ಮಾನವ ಸಂಪ ನ್ಮೂಲವೇ ಕಾರಣ ಎಂದರು.
ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಮಾತನಾಡಿದರು. ಪತ್ರಕರ್ತ ರವೀಂದ್ರ ಭಟ್ಟ, ಉಪವಿಭಾಗಾಧಿಕಾರಿ ಆರ್.ಶೋಭಿತಾ, ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಕೆ.ಟಿ.ರವಿಕುಮಾರ್, ಲೆಕ್ಕಪರಿಶೋಧಕ ಸುರೇಂದ್ರ ಹೆಗ್ಡೆ, ರಮೇಶ್ ಬಾಬು, ಗೋಪಾಲ್ ಪಾಲ್ಗೊಂಡಿದ್ದರು.