ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದಿಂದ ಜ.7ರಂದು ಶಕುಂತಲಾ ಜಯದೇವ ಶರಣ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ತಿಳಿಸಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಸಂಜೆ 5 ಗಂಟೆಗೆ ಆಯೋಜಿಸಿರುವ ಸಮಾರಂಭದಲ್ಲಿ ಸಮಾಜ ಸೇವಕ ಮೈಸೂರಿನ ಜಿ.ಎ.ಶಿವಲಿಂಗಯ್ಯ, ಭದ್ರಾವತಿಯ ಡಾ.ಎಸ್.ಎಸ್.ವಿಜಯಾ (ಡಾ.ವಿಜಯದೇವಿ) ಅವರಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಪ್ರಶಸ್ತಿ ಪ್ರದಾನ ಮಾಡುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದತ್ತಿ ದಾಸೋಹಿ ಶಕುಂತಲಾ ಜಯದೇವ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶರಣ ಸಾಹಿತ್ಯ, ಸಂಸ್ಕೃತಿ ಸಂರಕ್ಷಣೆ, ಸಂಶೋಧನೆ, ಪ್ರಕಟಣೆ, ಪ್ರಸಾರದ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಶ್ರೀಮಠದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 1986ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಅಖಿಲ ಶರಣ ಸಾಹಿತ್ಯ ಪರಿಷತ್ತು ಜಿಲ್ಲೆ ಅಲ್ಲದೇ ಹೊರ ನಾಡಿನಲ್ಲಿ ಶರಣ ಸಾಹಿತ್ಯ ಪ್ರಸಾರದಲ್ಲಿ ತೊಡಗಿರುವವರನ್ನು ಈ ಮೂಲಕ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ ಎಂದರು.
ಪ್ರತಿ ವರ್ಷ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬ ಮಹನೀಯ, ಒಬ್ಬ ಮಹಿಳೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು 20 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಸನ್ಮಾನವನ್ನು ಒಳಗೊಂಡಿದೆ ಎಂದು ತಿಳಿಸಿದರು.
ಮುಖಂಡರಾದ ಹೆಳವರಹುಂಡಿ ಸಿದ್ದಪ್ಪ, ಶಾರದಾ ಶಿವಲಿಂಗಯ್ಯ, ಡಾ.ಮುದ್ದುಮಲ್ಲೇಶ್, ಟಿ.ಎಸ್.ಕುಮಾರಸ್ವಾಮಿ ಇದ್ದರು.