5.34 ಲಕ್ಷ ರೂ.ಉಳಿತಾಯ ಮುಂಗಡ ಪತ್ರ ಮಂಡನೆ

Presentation of Rs. 5.34 lakh savings budget
ಹುನಗುಂದ ಪಟ್ಟಣದ ಪುರಸಭೆಯಲ್ಲಿ ಮಂಗಳವಾರ 2025-26ನೇ ಸಾಲಿನ ಆಯವ್ಯಯ ಸಭೆ ನಡೆಯಿತು. ಭಾಗ್ಯಶ್ರೀ ರೇವಡಿ, ಚಂದ್ರು ತಳವಾರ, ಸಾಂತಪ್ಪ ಹೊಸಮನಿ, ಮಹೇಶ ಬೆಳ್ಳಿಹಾಳ ಮತ್ತಿತರರಿದ್ದಾರೆ.
Published on

ಹುನಗುಂದ: ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ 5.34 ಲಕ್ಷ ರೂ. ಉಳಿತಾಯ ಮುಂಗಡ ಪತ್ರ ಮಂಡಿಸಿದರು.

ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ನಡೆದ ಆಯವ್ಯಯ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, 2025-26ನೇ ಸಾಲಿನ ಬಜೆಟ್‌ನಲ್ಲಿ ಆಸ್ತಿ ತೆರಿಗೆ, ನೀರಿನ ಕರ, ವಿದ್ಯುತ್‌ಶಕ್ತಿ ಅನುದಾನ, ಅಂಗಡಿ ಬಾಡಿಗೆ, ಲೈಸೆನ್ಸ್, ಅಭಿವೃದ್ಧಿ ಕರ, ಖಾತಾ ಬದಲಾವಣೆ, ಸಾಮಾನ್ಯ ಕರಗಳು, ಭೂಮಿ ಮಾರಾಟ, 15ನೇ ಹಣಕಾಸು, ಮುಖ್ಯಮಂತ್ರಿಗಳ ಅನುದಾನ, ರಾಯಲ್ಟಿ, ಕಾರ್ಮಿಕ ಕಲ್ಯಾಣ ನಿಧಿ, ಅರೋಗ್ಯ ಕರ, ಮಾರಾಟ ತೆರಿಗೆ, ಆದಾಯ ತೆರಿಗೆ ಸೇರಿ ವಿವಿಧ ಕರಗಳಿಂದ ಅಂದಾಜು 20.06 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಸಿಬ್ಬಂದಿ ವೆಚ್ಚಗಳು, ವಾಹನ ಖರೀದಿ, ಸ್ವಾಗತ ಕಮಾನು, ಕೌನ್ಸಿಲ್ ಸಂಬಂಧಿತ ವೆಚ್ಚಗಳು, ಬೀದಿ ದೀಪ ನಿರ್ವಹಣೆ, ಆರೋಗ್ಯ ಶಾಖೆ ವೆಚ್ಚಗಳು, ವಾಣಿಜ್ಯ ಮಳಿಗೆಗಳು, ಹೊಸ ಗಟಾರು ನಿರ್ಮಾಣ, ವಿದ್ಯುತ್ ವೆಚ್ಚ, ನೀರು ಸರಬರಾಜು ಪೈಪ್‌ಲೈನ್, ಕಂಟೇನರ್, ಡಸ್ಟಬಿನ್ ಖರೀದಿಗಾಗಿ 20 ಕೋಟಿ ಖರ್ಚು ರೂ. ಅಂದಾಜಿಸಲಾಗಿದೆ ಎಂದು ವಿವರಿಸಿದರು.

ಪೂರಕ ಬಜೆಟ್ ಚರ್ಚೆಯಲ್ಲಿ ಸದಸ್ಯರಾದ ಚಂದ್ರು ತಳವಾರ, ಸಾಂತಪ್ಪ ಹೊಸಮನಿ, ಮಹೇಶ ಬೆಳ್ಳಿಹಾಳ, ಖೈರೂನುಬಿ ನಾಯಕ ಮಾತನಾಡಿ, ಪುರಸಭೆಯಲ್ಲಿ ಕಳೆದ ಕೆಲವು ತಿಂಗಳಿಂದ ಉತಾರ ನೀಡುತ್ತಿಲ್ಲ. ಹಿರೇಹಳ್ಳದಲ್ಲಿನ ಹೂಳು ತೆಗದಿಲ್ಲ, ಪಟ್ಟಣದ ಪ್ರಮುಖ ಕಡೆ ಚರಂಡಿಗಳು ದುರ್ವಾಸನೆ ಬೀರುತ್ತಿವೆ. ಜತೆಗೆ ವಾರ್ಡ್‌ಗಳಲ್ಲಿ ಬೀದಿ ದೀಪಗಳು ಬೆಳಗುತ್ತಿಲ್ಲ. ಇಂತಹ ಹತ್ತಾರು ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರಿಗೆ ತಿಳಿಸಿದರೂ ಪ್ರಯೋಜವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ತೋಡಿಕೊಂಡರು.

ಸದಸ್ಯರಾದ ಚಂದಪ್ಪ ಕಡಿವಾಲ, ಯಲ್ಲಪ್ಪ ನಡುವಿನಮನಿ, ಮೈನು ಧನ್ನೂರ, ಗಿರಿಜಮ್ಮ ಮಠ, ಗುರುಲಿಂಗಪ್ಪ ಇಂಗಳಗಿ, ರಾಜು ಹಡಪದ, ವ್ಯವಸ್ಥಾಪಕ ಎಂ.ಎಸ್. ಕಳ್ಳಿಗುಡ್ಡ, ಮಹಾಂತೇಶ ತಾರಿವಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net