

ಮಂಡ್ಯ: ಕೃಷ್ಣ ತೀರದ ನನ್ನನ್ನು ಕಾವೇರಿ ತೀರಕ್ಕೆ ಕರೆತಂದು ಚಳವಳಿವ, ವಿಚಾರಶೀಲತೆಗೆ ಮಾನ್ಯತೆ ಕೊಟ್ಟಿದ್ದೀರಿ. ಚಳವಳಿ ಎಂಬುದು ವಿಚಾರ, ಪ್ರದೇಶ, ಭಾಷೆ, ಪ್ರಾಂತ್ಯವನ್ನು ಮೀರಿ ಸಂಬಂಧವನ್ನು ಗಳಿಸಿರುವುದು ಇದಕ್ಕೆ ಕಾರಣ ಎಂದು ಸಾಮಾಜಿಕ ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಏಳನೇ ವರ್ಷದ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕೇಶವಮೂರ್ತಿ ಅವರು ಪ್ರತಿಭಾವಂತರು. ಈ ಭಾಗದಲ್ಲಿ ವೈಚಾರಿಕತೆ ಹುಟ್ಟುಹಾಕಿ ಹೊಸ ತಲೆಮಾರನ್ನು ಬೆಳೆಸಿದರು. ಯಾವುದೇ ವಿಚಾರ ವಿಚಾರವಷ್ಟೇ ಆಗಿದ್ದರೆ ಚಿಂತನೆ ಆಗುತ್ತದೆ. ಅದೇ ವಿಚಾರಗಳನ್ನು ಇಂದಿನ ತಲೆಮಾರಿಗೆ ಹಸ್ತಾಂತರವಾಗಿ ಬೆಳವಣಿಗೆ ಪ್ರೇರಣೆಯಾದರೆ ಅದು ಸಿದ್ಧಾಂತವಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್, ಮಾರ್ಕ್ಸ್‌ವಾದದ ಚಿಂತನೆಗಳು ಅವರ ಕಾಲದಲ್ಲಿ ವಿಚಾರವಾಗಿದ್ದು, ಈಗ ಕಾಲಘಟ್ಟ ಮೀರಿ ನಮ್ಮ ಕಾಲಘಟ್ಟಕ್ಕೆ ಬರಬರುತ್ತಾ ಬದುಕಿನ ಪ್ರಶ್ನೆಗೆ ಉತ್ತರ ಕೊಡುವ ಸಿದ್ಧಾಂತಗಳಾಗಿವೆ. ಇಂದಿಗೂ ಅವರ ಚಿಂತನೆಗಳು ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಕಾರಣವಾಗಿವೆ ಎಂದು ಬಣ್ಣಿಸಿದರು.
ಬೆಂಗಳೂರು ಗಾಂಧಿ ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ಎನ್.ವಿಶುಕುಮಾರ್ ಮಾತನಾಡಿ, ರೈತ, ದಲಿತ, ಜನಪರ ಹೋರಾಟ ನೋಡಿದ ನಮಗೆ ಇಂದು ಚಳವಳಿ ಅವಸಾನವಾಗುವ ಕಾಲದಲ್ಲಿದೆ ಎನಿಸುತ್ತಿದೆ. ಇದಕ್ಕೆ ನಮ್ಮ ಸಮಾಜದ ಪ್ರಭುತ್ವದ ಪಾಲು ದೊಡ್ಡದಾಗಿದೆ. ಪ್ರಭುತ್ವದ ಜತೆ ಪಾಲುದಾರರಾದರೆ ಚಳವಳಿ ಶಕ್ತಿ ಕಳೆದುಕೊಳ್ಳುತ್ತದೆ. ಹಿಂದಿನವರು ಸ್ವಾರ್ಥ ಬಿಟ್ಟು ಸಮುದಾಯ ಪ್ರಜ್ಞೆ ಬೆಳೆಸಿಕೊಂಡಿದ್ದರು. ನಾವು ಸ್ವಾರ್ಥ ಬಿಟ್ಟಾಗ ದೇಶದ ಉದ್ಧಾರ ಸಾಧ್ಯ. ನಮಗೆ ಯುವ ನಾಯಕರು ಬೇಕು. ನಮ್ಮನ್ನು ಹಿಂದಿನವರು ಕಟ್ಟಿ ಬೆಳೆಸಿದ್ದಾರೆ. ಆದರೆ ನಾವು ಯಾರನ್ನು ಸೃಷ್ಟಿ ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದಿನ ತಲೆಮಾರಿಗೆ ಯುವ ಸಮುದಾಯವನ್ನು ಕಟ್ಟಬೇಕು ಎನ್ನುವ ಪ್ರಜ್ಞೆ ನಮಗಿರಬೇಕು ಎಂದರು.
ವಿಮರ್ಶಕಿ ಎಂ.ಎನ್.ಆಶಾದೇವಿ ಮಾತನಾಡಿ, ಸ್ವಾರ್ಥವನ್ನು ಮೀರಿ ಬದುಕುವುದು ತುಂಬಾ ಕಷ್ಟದ ಕೆಲಸ. ಸಿದ್ದನಗೌಡ ಪಾಟೀಲರು ಕಷ್ಟದ ದಾರಿಯನ್ನು ಹಿಡಿದ ನಿಜವಾದ ಶರಣಾಗಿದ್ದಾರೆ. ಅವರಿಗೆ ಪ್ರಶಸ್ತಿ ಕೊಡುತ್ತಿರುವುದು ಅರ್ಥಪೂರ್ಣವಾಗಿದೆ. ನಾವು ಆರಾಮವಾಗಿ ಬದುಕುವ ಭೋಗಜೀವಿಗಳಾದರೆ, ಸಿದ್ದನಗೌಡ ಪಾಟೀಲರು ವ್ರತಜೀವಿಗಳು. ಅವರ ಬಗ್ಗೆ ನಾವು ಮಾತನಾಡುವುದೆಂದರೆ ಒಂದು ರೀತಿಯ ವಿರೋಧಾಭಾಸ ಉಂಟಾಗುತ್ತದೆ. ಪಾಟೀಲರ ಬಹಳ ದೊಡ್ಡ ಶಕ್ತಿ ಅವರ ನೈತಿಕ ಶಕ್ತಿಯಾಗಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಟ್ರಸ್ಟಿ ಕೆ.ಬೋರಯ್ಯ, ಸಾಹಿತಿ ಎನ್.ಜಗದೀಶ್ ಕೊಪ್ಪ, ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.
ಡಾ.ಸಿದ್ದನಗೌಡ ಪಾಟೀಲ ಅವರಿಗೆ 10 ಸಾವಿರ ರೂ ನಗದಿನ ಜತೆಗೆ ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತೆಯೇ ಕೇಶವಮೂರ್ತಿ ಅವರ ಬರಹಗಳ ಸಂಗ್ರಹದ ಕೊನೆಯ ಪುಸ್ತಕ ’ಎಲ್ಲಾ ಶ್ರೀಮಾನ್‌ಗಳು 420 ಗಳೇ’ ಬಿಡುಗಡೆ ಮಾಡಲಾಯಿತು.