

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾತೃಭಾಷೆಯನ್ನು ಮರೆತರೆ ಮಾತೆಯನ್ನು ಮರೆತಂತೆ. ತಾಯಂದಿರು ಇಂಗ್ಲಿಷ್ ಮಾಧ್ಯಮದ ಬೆನ್ನು ಹತ್ತಬಾರದು. ಮಾತೃಭಾಷೆಯ ಮಾಧ್ಯಮದಲ್ಲಿ ಕಲಿತರೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯಗಳ ಪರಿಚಯವಾಗುತ್ತದೆ ಎಂದು ಹಿರಿಯ ವೈದ್ಯೆ ಡಾ. ವಿಜಲಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ರೇಣವ್ವ ಅಂಗಡಿ ಹಾಗೂ ದಿ. ರುದ್ರಪ್ಪ ಗುಂಡಪ್ಪ ಅಂಗಡಿ ಸಂಸ್ಮರಣ ದತ್ತಿ ಅಂಗವಾಗಿ ಬುಧವಾರ ಆಯೋಜಿಸಿದ್ದ `ತಾಯಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ `ತಾಯಿ ಮತ್ತು ಸಂಸ್ಕೃತಿ' ವಿಷಯ ಕುರಿತು ಅವರು ಮಾತನಾಡಿದರು.
ಅಂಕಗಳ ಬೆನ್ನು ಹತ್ತದೆ ಸಂಬ0ಧ, ಕೌಶಲ, ಮೌಲ್ಯಗಳು, ಸಂಸ್ಕಾರ ಬೆಳೆಸುವುದರಿಂದ ಮಗುವಿನ ವ್ಯಕ್ತಿತ್ವ ಆದರ್ಶಮಯವಾಗುತ್ತದೆ ಎಂದರು.
ಕಪ್ಪತಗುಡ್ಡದ ನಂದಿವೇರಿ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಜಾಣ್ಮೆಯನ್ನು ಕಲಿಸಬೇಕು ಎಂದರು.
ಹುಬ್ಬಳ್ಳಿಯ ಹಿರಿಯ ವೈದ್ಯರಾದ ಡಾ. ಮಹೇಶ ನಾಲವಾಡ ಮತ್ತು ಡಾ. ರವಿಕಿರಣ ಅವರಿಗೆ `ತಾಯಿ' ಪ್ರಶಸ್ತಿಯನ್ನು ಮಾನವ ಹಕ್ಕುಗಳ ಆಯೋಗದ ಸದಸ್ಯ ಸುರೇಶ ಒಂಟಗೋಡಿ ಪ್ರದಾನ ಮಾಡಿದರು.
ದತ್ತಿದಾನಿ ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಶಾಂತಿ ಮಿಶನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ, ಶಂಕರ ಕುಂಬಿ, ಡಾ. ಜಿನದತ್ತ ಹಡಗಲಿ, ಸತೀಶ ತುರಮರಿ, ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಡಾ. ಡಿ.ಎಂ. ಹಿರೇಮಠ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಅರುಣಾ ಹಳ್ಳಿಕೇರಿ, ಪಾರ್ವತಿ ಹಾಲಭಾವಿ, ಶಾಂತವೀರ ಬೆಟಗೇರಿ, ಇತರರಿದ್ದರು.