

ಮೈಸೂರು: ಸಮತಾ ಅಧ್ಯಯನ ಕೇಂದ್ರದಿಂದ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು.21ರಂದು ಬೆಳಗ್ಗೆ 10.30ಕ್ಕೆ ಸರಸ್ವತಿಪುರಂ ಕಾಮಾಕ್ಷಿ ಆಸ್ಪತ್ರೆ ಸಮೀಪದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ.ಉಷಾ ಅವರಿಗೆ 2024ನೇ ಸಾಲಿನ ಪ್ರಶಸ್ತಿಯನ್ನು ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜು ಡೀನ್ ಡಾ.ಶಶಿಕಲಾ ಗುರುಪುರ ಪ್ರದಾನ ಮಾಡಲಿದ್ದಾರೆ. ಶಿವಮೊಗ್ಗದ ‘ಅಹರ್ನಿಶಿ’ ಪ್ರಕಾಶನ ಪ್ರಕಟಿಸಿರುವ ಉಷಾ ಅವರ ‘ಬಾಳ ಬಟ್ಟೆ’ ಕಾದಂಬರಿಯನ್ನು 25 ಸಾವಿರ ರೂ. ನಗದು ಬಹುಮಾನ, ಫಲಕವನ್ನು ಒಳಗೊಂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದಬ್ಬೆ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯ ಮಟ್ಟದ ಕಾವ್ಯ ಮತ್ತು ಲಲಿತ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ವಿಜಯಾದಬ್ಬೆ ಅವರ ಒಡನಾಡಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಡಾ.ಟಿ.ಸುಬ್ರಹ್ಮಣ್ಯಂ ಅವರು ವಿಜಯಾ ಅವರೊಂದಗಿನ ಒಡನಾಟದ ಕುರಿತು ಮಾತನಾಡಲಿದ್ದಾರೆ. ಕೇಂದ್ರದ ಅಧ್ಯಕ್ಷೆ ಡಾ.ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
20ಕ್ಕೆ ಸಾಹಿತ್ಯ ಕಮ್ಮಟ: ಕಾವ್ಯ ಮತ್ತು ಲಲಿತ ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರು ಮತ್ತು ಆಸಕ್ತರಿಗಾಗಿ ಜು.20ರ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್‌ನಲ್ಲಿ ಕಾವ್ಯ ಮತ್ತು ಪ್ರಬಂಧ ಕಮ್ಮಟವನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ಆರಂಭವಾಗುವ ಮೊದಲ ಗೋಷ್ಠಿಯಲ್ಲಿ ಕವಯತ್ರಿ ಎಚ್.ಆರ್.ಸುಜಾತಾ ಮತ್ತು ಮೌಲ್ಯಾ ಸ್ವಾಮಿ ಅವರು ಕಾವ್ಯಾನುಸಂಧಾನ ನಡೆಸುವರು. ನಂತರ ನಡೆಯುವ ಪ್ರಬಂಧ ಕಮ್ಮಟದಲ್ಲಿ ಲೇಖಕ ಡಾ.ರಾಜಪ್ಪ ದಳವಾಯಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಆರಂಭವಾಗುವ 3ನೇ ಗೋಷ್ಠಿಯಲ್ಲಿ ಡಾ.ಶಶಿಕಲಾ ಗುರುಪುರ ಅವರು ‘ಸಂವೇದನಾಶೀಲ ಬರಹ-ಕೆಲವು ಆಯಾಮಗಳು’ ವಿಷಯವನ್ನು ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.