

ಮಡಿಕೇರಿ: ಕುಶಾಲನಗರದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2022-23ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷೆಯಲ್ಲಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮತ್ತು 15 ನೇ ಹಣಕಾಸು ಯೋಜನೆ ಕಾಮಗಾರಿಗಳು ನಡೆದಿರುವ ಹಿನ್ನೆಲೆಯಲ್ಲಿ ಅದರ ಲೆಕ್ಕಪತ್ರವನ್ನು ಗ್ರಾಮ ಸಭೆಯಲ್ಲಿ ಮಂಡನೆ ಮಾಡಲಾಯಿತು.
ಸಭೆಯಲ್ಲಿ ಕಾಮಗಾರಿಗಳ ಅನುಮೋದನೆ ಪಡೆಯಲಾಯಿತು. ಲೆಕ್ಕಪತ್ರಗಳ ವರದಿಯನ್ನು ಉದ್ಯೋಗ ಖಾತರಿ ತಾಲೂಕು ಸಂಯೋಜಕ ದಿನೇಶ್ ಮಂಡಿಸಿದರು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಕೂಡಿಗೆಯ ಜಿಲ್ಲಾ ಕೋಳಿ ಸಾಕಣೆ ಕೇಂದ್ರದ ಉಪ ನಿರ್ದೇಶಕ ಡಾ.ನಾಗರಾಜ್ ಇದ್ದರು. ಕಾಮಗಾರಿಗಳು ನಡೆದ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಉದ್ದೇಶ, ವೈಯಕ್ತಿಕ ಕಾಮಗಾರಿಗಳ ಮಾಹಿತಿ ಸೇರಿದಂತೆ ವೈಯಕ್ತಿಕ ಕಾಮಗಾರಿಗಳ ಲಾಭ ಪಡೆಯಬಹುದು ಎಂಬುದರ ಬಗ್ಗೆ ವಿವರಿಸಿದರು.
ಎಲ್ಲ ವಾರ್ಡ್‌ಗಳಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ತಿಳಿಸಿದರು. ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಕೆ.ಕೆ.ಭೋಗಪ್ಪ, ಫಿಲೋಮಿನಾ, ಗೌರಮ್ಮ, ಚೈತ್ರಾ ಮಂಜುನಾಥ, ಶುಂಷುದೀನ್, ಮಂಜುನಾಥ, ಸುರೇಶ್, ಹರೀಶ್, ಗಿರೀಶ್, ಅಭಿವೃದ್ಧಿ ಅಧಿಕಾರಿ ಸಂತೋಷ್ ಸೇರಿದಂತೆ ಗ್ರಾಮಸ್ಥರು ಇದ್ದರು.