

ಮೈಸೂರು: ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಸರ್ಕಾರದ ಬಜೆಟ್ ಕೃಷಿಕರ ಪರವಾಗಿ ಇರಬೇಕು ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಕೃಷಿಯಲ್ಲಿ ಕರ್ನಾಟಕ ಮಾದರಿಗಾಗಿ, ರೈತ ಸಮುದಾಯದ ಹಕ್ಕೊತ್ತಾಯಗಳನ್ನು ಸಿಎಂಗೆ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಬಜೆಟ್ ರೈತರ ಹಿತಚಿಂತನೆ ಪರವಾಗಿ ಇರಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಸರ್ಕಾರದ 10 ವರ್ಷದ ಕೃಷಿ ನೀತಿ ಹೇಗಿರಬೇಕು ಎಂಬ ಪರಿಕಲ್ಪನೆಯೊಡನೆ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಹಕ್ಕೊತ್ತಾಯಗಳನ್ನು ಮಂಡಿಸಲಾಗಿದೆ. ಹಾಗಾಗಿ ಬಜೆಟ್ ಬಗ್ಗೆ ಅನೇಕ ನಿರೀಕ್ಷೆಗಳಿವೆ. ಆದರೆ, ರಾಜ್ಯ ಸರ್ಕಾರವು ತನ್ನ ಆರ್ಥಿಕ ಇತಿಮಿತಿಯೊಳಗೆ ಕೃಷಿ ಕ್ಷೇತ್ರಕ್ಕೆ ಏನೇನು ಮಾಡಬಹುದು ಎಂಬ ಸಲಹೆ ನೀಡಲಾಗಿದೆ. ಜತೆಗೆ ರಾಜ್ಯವನ್ನು ಬರಮುಕ್ತ ಕರ್ನಾಟಕವಾಗಿಸಲು ಏನು ಮಾಡಬೇಕೆಂದೂ ವಿವರಿಸಲಾಗಿದೆ ಎಂದು ತಿಳಿಸಿದರು.
ಕೃಷಿ ವ್ಯವಸ್ಥೆ ದಿಕ್ಕು ತಪ್ಪಿರುವುದರಿಂದಾಗಿ ರೈತ ಸಮುದಾಯದ ಮೇಲೆ ಹಲವು ಪರಿಣಾಮ ಬೀರುತ್ತಿದೆ. ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಅವರನ್ನು ಖಿನ್ನತೆ ಕಾಡುತ್ತಿದೆ. ಮದುವೆ ಆಗಲು ರೈತ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಹೀಗಾಗಿ ಕೃಷಿ ಲಾಭದಾಯಕವಾಗಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬಲವಂತವಾಗಿ ಸಾಲ ವಸೂಲಾತಿ ಬೇಡ: ಕೃಷಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಉಚಿತವಾಗಿರಬೇಕು. ತೋಟದ ಮನೆಯಲ್ಲಿ ಇರುವವರಿಗೆ ಗೃಹ ಬಳಕೆಯ ಅಗತ್ಯವಿರುವಷ್ಟು ವಿದ್ಯುತ್ ಪೂರೈಸಬೇಕು. ಸಣ್ಣ ಕಾಫಿ ಬೆಳೆಗಾರರಿಗೆ ವಿದ್ಯುತ್ ಸಬ್ಸಿಡಿ ನೀಡಬೇಕು. ಕೃಷಿ ಜಮೀನುಗಳ ಹದ್ದುಬಸ್ತು, ಪೋಡಿ ದುರಸ್ತಿ, ಸ್ಕೆಚ್, ಹೌಸಿಂಗ್ ಇ- ಸ್ವತ್ತು ದರ ಮೊದಲಿನಷ್ಟೇ ಇರಬೇಕು.
ಬರ ಇರುವ ಕಾರಣದಿಂದ ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು. 2018ರಲ್ಲಿ ಘೋಷಿಸಿದ ಸಾಲ ಮನ್ನಾ ಪ್ರಯೋಜನ ಎಲ್ಲ ರೈತರಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದು ನಾಗೇಂದ್ರ ಒತ್ತಾಯಿಸಿದರು.
ರೈತ ಸಹಕಾರ ಸಂಘಗಳಿಂದ ಖರೀದಿಸಿ: ಬಿಸಿಯೂಟ, ಅಂಗನವಾಡಿ, ಹಾಸ್ಟೆಲ್, ಜೈಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೃಷಿ ಉತ್ಪನ್ನಗಳು ಮತ್ತು ಸಂಸ್ಕರಿತ ಆಹಾರ ಪದಾರ್ಥಗಳನ್ನು ಕಡ್ಡಾಯವಾಗಿ ರೈತ ಸಹಕಾರ ಸಂಘಗಳು, ನೋಂದಾಯಿತ ಸ್ವಸಹಾಯ ಸಂಘಗಳು ಮೂಲಕವೇ ಖರೀದಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನಾಗನಹಳ್ಳಿ ವಿಜೇಂದ್ರ, ಮಂಡಕಳ್ಳಿ ಮಹೇಶ್, ಪಿ. ಮರಂಕಯ್ಯ ಇದ್ದರು.