ಜನಪರ ಯೋಜನೆಗಳ ಬಜೆಟ್ ಮಂಡಿಸಿ

hmc
Published on

ಶಿವಮೊಗ್ಗ: ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ರೈತರು, ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ಅನುಕೂಲಕರವಾದ ಯೋಜನೆಗಳ ಜಾರಿಗೆ ಒತ್ತು ನೀಡಬೇಕೆಂದು ಮಾಜಿ ಶಾಸಕರ ವೇದಿಕೆ ರಾಜ್ಯಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ.

ನಗರ ಹಾಗೂ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಆಶ್ರಯ ನಿವೇಶನ ಕೊಡಬೇಕು. ಸರ್ಕಾರಿ ಶಾಲೆಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸೌಲಭ್ಯ ಒದಗಿಸಬೇಕು. ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಬೇಕು. ಸರ್ಕಾರಿ ಆಸ್ಪತ್ರೆಗಳನ್ನು ನವೀಕರಿಸಿ ಎಲ್ಲ ಚಿಕಿತ್ಸೆ ಹಾಗೂ ಔಷಧ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಸಹಕಾರ ನೀಡಬೇಕು. ತುಂಗಭದ್ರಾ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಭದ್ರಾ ಹಾಗೂ ತುಂಗಾ ಡ್ಯಾಂ ಸೇರಿದಂತೆ ದೊಡ್ಡ ಡ್ಯಾಂಗಳ ಆವರಣವನ್ನು ಕೆಆರ್‌ಎಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು.

ಶಿವಮೊಗ್ಗದಿಂದ ರಾಜಧಾನಿ ದೆಹಲಿಗೆ ನೇರ ವಿಮಾನಯಾನ ಹಾಗೂ ರೈಲು ಸೇವೆ ಪ್ರಾರಂಭಿಸಲು ಕೇಂದ್ರದೊಂದಿಗೆ ಪ್ರಯತ್ನಿಸಬೇಕು. ಬಜೆಟ್‌ನಲ್ಲಿ ಪೌರ ನೌಕರರ ಆರೋಗ್ಯ ಹಾಗೂ ನಿತ್ಯ ಉಪಾಹಾರ ಯೋಜನೆಯನ್ನು ರಾಜ್ಯಮಟ್ಟದಲ್ಲಿ ಪ್ರಾರಂಭಿಸಬೇಕು. ಇದೆಲ್ಲದಕ್ಕೂ ಅಗತ್ಯವಿರುವ ಹಣವನ್ನು ಶ್ರೀಮಂತರು ಬಳಸುವ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹಾಕುವ ಮೂಲಕ ಸಂಗ್ರಹಿಸುವಂತೆ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net