

ಹುಬ್ಬಳ್ಳಿ: ವಿದ್ಯಾರ್ಥಿಗಳನ್ನು ಕೌಶಲಯುಕ್ತರನ್ನಾಗಿ ಹೊರತರಬೇಕೆಂಬ ಆಶಯದೊಂದಿಗೆ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು (ಎನ್ಇಪಿ) ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳಬೇಕು. ಒಂದು ವೇಳೆ ರಾಜ್ಯಗಳು ಪ್ರತ್ಯೇಕ ಶಿಕ್ಷಣ ನೀತಿ ಮಾಡಿಕೊಂಡರೆ ಶಿಕ್ಷಣವು ಕವಲು ದಾರಿಯಲ್ಲಿ ಸಾಗುತ್ತದೆ ಎಂದು ಕಲಬುರ್ಗಿಯ ಕೇಂದ್ರಿಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು.
ನಗರದ ಬಿವಿಬಿ ಆವರಣದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ (ಕೆಆರ್ ಎಂಎಸ್ಎಸ್) ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರೇರಣಾ ದಿವಸ ಮತ್ತು ಎನ್ಇಪಿ 2020ರ ಐದು ವರ್ಷದ ಪಯಣ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಶಿಕ್ಷಣ ನೀತಿ 2020ನ್ನು ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕ ಆಗಿದೆ. ಆದರೆ, ನಂತರದಲ್ಲಿ ರಾಜ್ಯ ಸರ್ಕಾರ ಎಸ್ಇಪಿ ತಂದಿದೆ. ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ತೊಂದರೆ ಆಗದ ರೀತಿಯಲ್ಲಿ ನೀತಿಗಳು ಇರಬೇಕು. ಯಾವುದೇ ಸರ್ಕಾರ ಇರಲಿ ಶೈಕ್ಷಣಿಕ ವ್ಯವಸ್ಥೆ ಹಿಂದೆ ಬೀಳಬಾರದು. 2047ರ ವಿಕಸಿತ ಭಾರತ ಸಾಕಾರಗೊಳಿಸಲು ಶೈಕ್ಷಣಿಕ ಸುಧಾರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಎನ್ಇಪಿಯನ್ನು ಆರಂಭದಲ್ಲಿ ಅಪಪ್ರಚಾರ ಮಾಡಲಾಯಿತು. ಅದರ ಅನೇಕ ಉತ್ತಮ ಗುಣಗಳನ್ನು ಗಮನಿಸಬೇಕು. ಎಲ್ಲರೂ ಇದನ್ನು ಸ್ವಾಗತಿಸಬೇಕು. ಕೇಂದ್ರಿಯ ವಿವಿಯಲ್ಲಿ ಎನ್ಇಪಿ ಜಾರಿ ಮಾಡಲಾಗಿದೆ. ಇದು ಗುಣಮಟ್ಟದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಉದ್ದೇಶ ಹೊಂದಿದೆ ಎಂದರು.
ಅತಿಥಿಗಳಾಗಿದ್ದ ನ್ಯಾಕ್ ನಿರ್ದೇಶಕ ಪ್ರೊ. ಗಣೇಶನ್ ಕನ್ನಬಿರನ್ ಮಾತನಾಡಿ, 2047ಕ್ಕೆ ಪ್ರಗತಿಪರ ಭಾರತವಾಗಿಸುವ ಗುರಿಯೊಂದಿಗೆ ಸಾಗುತ್ತಿದ್ದೇವೆ. ಈ ಉದ್ದೇಶ ಈಡೇರಬೇಕಿರುವುದು ಉತ್ತಮ ಶೈಕ್ಷಣಿಕ ವಾತಾವರಣದಿಂದ ಮಾತ್ರ. ವಿದ್ಯಾರ್ಥಿಗಳ ನಿರ್ವಹಣೆ ಇಂದಿನ ದಿನಗಳಲ್ಲಿ ಕಷ್ಟದ ಕೆಲಸವಾಗಿದೆ. ಹಾಗಾಗಿ ಅಧ್ಯಾಪಕರಿಗೆ ತರಬೇತಿ ನೀಡಬೇಕು. ಇದಕ್ಕಾಗಿ ಕೆಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಆದರೆ, ಗುರುವಿಗೆ ಇರುವ ಗೌರವ ಸ್ಥಾನ ಮಾತ್ರ ಬದಲಾಗಿಲ್ಲ. ಎನ್ಇಪಿ, ಎಸ್ಇಪಿ ಏನೇ ಇರಲಿ ಅದರ ಉದ್ದೇಶ ಮಾತ್ರ ಹಿಂದಿನ ವೈಭವವನ್ನು ವಾಪಸ್ ತರಬೇಕೆಂಬುದೇ ಆಗಿರುತ್ತದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಅಶೋಕ ಶೆಟ್ಟರ್, ಶಿಕ್ಷಕರಾದವರ ಮೇಲೆ ಸಮಾಜ ಹಾಗೂ ದೇಶವನ್ನು ಸುವ್ಯವಸ್ಥಿತವಾಗಿ ಮುನ್ನಡೆಸಲು ಉತ್ತಮ ನಾಗರಿಕರನ್ನು ನಿರ್ಮಿಸುವ ಮಹತ್ತರ ಜವಾಬ್ದಾರಿ ಇದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕೆಆರ್ ಎಂಎಸ್ಎಸ್ ಒಂದು ಹೊಸ ಹೆಜ್ಜೆ ಇಟ್ಟು ಉತ್ತಮ ಶಿಕ್ಷಕರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಮಕ್ಕಳಿಗೆ ಆದರ್ಶವಾಗಿ ಕೊನೆಯವರೆಗೂ ಉಳಿಯುವವರು ಶಿಕ್ಷಕರು ಹಾಗೂ ಅವರ ಕೊಡುಗೆ ಮಾತ್ರ ಎಂದರು.
ವಿಭವ ಇಂಡಸ್ಟ್ರೀಸ್ ಸಿಇಒ ಎಚ್.ಎನ್. ನಂದಕುಮಾರ ಮಾತನಾಡಿದರು.
ಕನಕದಾಸ ಶಿಕ್ಷಣ ಸಮಿತಿ ಅಧ್ಯಕ್ಷ ರವೀಂದ್ರನಾಥ ದಂಡಿನ, ಕವಿವಿ ಮಾಜಿ ಕುಲಪತಿ ಪ್ರಮೋದ ಗಾಯಿ, ಡಾ. ಎಚ್.ವಿ. ಬೆಳಗಲಿ, ಇತರರು ಇದ್ದರು.
ಪ್ರಶಸ್ತಿ ಪ್ರದಾನ:
ಅಧ್ಯಾಪಕ ಭೂಷಣ ಜೀವಮಾನ ಸಾಧನೆ ಪ್ರಶಸ್ತಿಯನ್ನು ಡಾ. ಬಿ.ಎಫ್. ದಂಡಿನ, ಡಾ. ಅಶೋಕ ಶೆಟ್ಟರ್ ಅವರಿಗೆ ನೀಡಿ ಗೌರವಿಸಲಾಯಿತು.
ಉತ್ತಮ ಆಡಳಿತ ವಿಭಾಗದಲ್ಲಿ ಡಾ. ಎಂ.ಬಿ. ಬಾಗಡಿ, ಉತ್ತಮ ಶಿಕ್ಷಕಿ ಡಾ. ಶಾರದಾ ಭಟ್, ವನಮಾಲಾ ಖಾನಗೌಡ್ರ, ಉತ್ತಮ ಸಂಶೋಧಕ ಡಾ. ರಾಜೇಶ್ ಕಲ್ಕಂಬಕರ್, ಕ್ರೀಡಾ ಸಾಧಕ ಪ್ರೊ. ಜಿ.ಡಿ. ಭಟ್, ಉತ್ತಮ ಗ್ರಂಥಪಾಲಕ ಕಾಗಿನೆಲ್ಲಿ ಪಂಪಾಪತಿ, ದೈಹಿಕ ಶಿಕ್ಷಣ ನಿರ್ದೇಶಕ ಮನೋಜ್ ಕೋಪರ್ಡೆ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಕೆಆರ್ ಎಂಎಸ್ಎಸ್ ಸಂಸ್ಥಾಪಕ ಅಧ್ಯಕ್ಷ ಡಾ. ರಘು ಅಕಮಂಚಿ ಪ್ರಶಸ್ತಿಯ ಉದ್ದೇಶ ವಿವರಿಸಿದರು. ಅಧ್ಯಕ್ಷ ಡಾ. ಜಿ.ಕೆ. ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಪ್ರಮುಖರಾದ ಡಾ. ಸಂಗೀತಾ ಕಟ್ಟಿಮನಿ ವಂದಿಸಿದರು. ಕೋಶಾಧ್ಯಕ್ಷ ಡಾ. ಲಿಂಗರಾಜ ಹೊರಕೇರಿ, ಸಂದೀಪ ಬೂದಿಹಾಳ ಪರಿಚಯಿಸಿದರು. ಶೋಭಾ ಉಜ್ಜನಶೆಟ್ಟರ ಪ್ರಾರ್ಥಿಸಿದರು, ಪ್ರಸನ್ನ ಫಂಡರಿ ಸ್ವಾಗತಿಸಿದರು, ಡಾ. ಸಿ.ವಿ. ಮರಿದೇವರಮಠ ಮತ್ತು ಪ್ರೊ. ಶ್ರೀನಿವಾಸ ಕೊಪ್ಪಳ ನಿರೂಪಿಸಿದರು.