

ವಿಜಯವಾಣಿ ಸುದ್ದಿಜಾಲ ಕೋಲಾರ
ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಸಂಬಂಧ ಹೈಕೋರ್ಟ್ ದಾಖಲೆ ಕೇಳಿದ್ದು, ಮಾನ್ಯತೆ ಪಡೆದಿರುವ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಆ.13ರಂದು ಇವಿಎಂ ಉಗ್ರಾಣದ ಬಾಗಿಲು ತೆರೆಯಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.
2023ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಲೂರು ಕ್ಷೇತ್ರದ ಫಲಿತಾಂಶದ ತಕರಾರು ಅರ್ಜಿ ವಿಚಾರಣೆ ನಡೆಯುತ್ತಿದ್ದು, ಈ ಸಂಬಂಧ ಹೈಕೋರ್ಟ್ ದಾಖಲೆ ಕೇಳಿದೆ. ದಾಖಲೆ ಸಲ್ಲಿಸಲು ಮಾಲೂರು ಕ್ಷೇತ್ರಕ್ಕೆ ಸಂಬಂಧಿಸಿದ ಭದ್ರತಾ ಕೊಠಡಿ ತೆರೆದು ಮತ ಎಣಿಕೆ ಸಂದರ್ಭದಲ್ಲಿ ಸಂಗ್ರಹಿಸಿಟ್ಟಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಿದ್ದು, ಅಂದು ಸ್ಥಳದಲ್ಲಿ ಹಾಜರಿರುವಂತೆ ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಸಿಪಿಎಂ, ಆಮ್ ಆದ್ಮಿ ಪಾರ್ಟಿ, ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2023ರ ಮೇ 13ರಂದು ನಡೆದ ಮತ ಎಣಿಕೆಯಲ್ಲಿ ನಂಜೇಗೌಡ 50,955 ಮತ ಪಡೆದಿದ್ದರೆ, ಬಿಜೆಪಿಯ ಪ್ರತಿಸ್ಪರ್ಧಿ ಮಂಜುನಾಥಗೌಡ 50,707 ಮತ ಗಳಿಸಿದ್ದರು. ಕಡಿಮೆ ಅಂತರ ಮತಗಳಿಂದ ಪರಾಜಿತರಾದ ಹಿನ್ನೆಲೆಯಲ್ಲಿ ಮಂಜುನಾಥ್ಗೌಡ ಅವರು ಫಲಿತಾಂಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಫಲಿತಾಂಶದ ದಿನವೇ ಮಂಜುನಾಥಗೌಡ ಹಾಗೂ ಬೆಂಬಲಿಗರು ಮರು ಮತ ಎಣಿಕೆಗೆ ಪಟ್ಟು ಹಿಡಿದಿದ್ದರು. ಅದಕ್ಕೆ ಅವಕಾಶ ನೀಡದೆ ಅಂದಿನ ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರು ಅಭ್ಯರ್ಥಿಗಳ ಸಮ್ಮುಖದಲ್ಲಿ ಚುನಾವಣಾ ನಿಯಮದ ಪ್ರಕಾರ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಿದ್ದರು. ಯಾವುದೇ ವ್ಯತ್ಯಾಸ ಕಂಡುಬಾರದ ಕಾರಣ ಅಧಿಕೃತ ಫಲಿತಾಂಶ ಪ್ರಕಟಿಸಿದ್ದರು.
ನ್ಯಾಯಾಲಯದ ಸೂಚನೆಯಂತೆ ಚುನಾವಣಾ ಆಯೋಗದ ನಿರ್ದೇಶನ ಪಾಲಿಸಿ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿರುವ ಇವಿಎಂ ಉಗ್ರಾಣದ ಬಾಗಿಲು ತೆರೆಯಲು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅನುಮತಿ ನೀಡಿದ್ದಾರೆ. ಏನೇನು ಅಂಶಗಳನ್ನು ಮತ ಎಣಿಕೆ ವೇಳೆ ದಾಖಲಿಸಿಟ್ಟಿದ್ದೇವೆಯೋ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ದಾಖಲೆ ಸಲ್ಲಿಸಲು ಸಮಯಾವಕಾಶ ಕೋರಲಾಗಿದೆ ಎಂದರು.
ಆಯೋಗದ ನಿರ್ದೇಶನ ಪಾಲನೆ
ಚುನಾವಣೆ ಆಯೋಗದ ನಿರ್ದೇಶನ ಪಾಲಿಸಿ ಅಂದು ಬೆಳಗ್ಗೆ 11 ಗಂಟೆಗೆ ಉಗ್ರಾಣದ ಬಾಗಿಲು ತೆರೆಯುತ್ತೇವೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಪರ್ಧಾ ಕಣದಲ್ಲಿದ್ದ ಅಭ್ಯರ್ಥಿಗಳು ಹಾಜರಿರಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದರು.