ಕುಶಾಲನಗರದಲ್ಲಿ ಸಂಜೆ ಕಾಲೇಜು ತೆರೆಯಯಲು ಸಿದ್ಧತೆ

Preparing to open evening college in Kushalanagar
Published on

ಮಡಿಕೇರಿ:

ಉದ್ಯೋಗದಲ್ಲಿ ಇದ್ದುಕೊಂಡೇ ಪದವಿ ಪಡೆಯಬೇಕು ಎನ್ನುವ ಚಿಂತನೆಯಲ್ಲಿ ಇರುವವರಿಗೆ ಕೊಡಗು ವಿಶ್ವವಿದ್ಯಾಲಯ ಶುಭ ಸುದ್ದಿಯೊಂದನ್ನು ಕೊಟ್ಟಿದೆ. ಕುಶಾಲನಗರದಲ್ಲಿ ಸಂಜೆ ಕಾಲೇಜು ತೆರೆಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಶೈಕ್ಷಣಿಕ ವರ್ಷದಿಂದಲೇ ಕೊಡಗಿನ ಪ್ರಪ್ರಥಮ ಸಂಜೆ ಕಾಲೇಜು ಅಧಿಕೃತವಾಗಿ ಆರಂಭವಾಗಲಿದೆ.

ವಿವಿಧ ಕಾರಣಗಳಿಂದ ಹಲವರು ಓದು ಮೊಟಕುಗೊಳಿಸಿ ಉದ್ಯೋಗ ಸೇರಿಕೊಂಡುಬಿಟ್ಟಿರುತ್ತಾರೆ. ಓದು ಮತ್ತೆ ಮುಂದುವರಿಸಬೇಕು ಎನ್ನುವ ಆಸೆ ಇದ್ದರೂ ಇಂಥವರಿಗೆ ಅವಕಾಶಗಳು ಇರುವುದಿಲ್ಲ. ದೊಡ್ಡ ನಗರಗಳಲ್ಲಿ ಸಂಜೆ ಕಾಲೇಜುಗಳು ಆಸಕ್ತರಿಗೆ ಪದವಿ ಪೂರೈಸಲು ಅವಕಾಶ ಮಾಡಿ ಕೊಡುತ್ತದೆ. ಇಂಥ ಅವಕಾಶಗಳು ಗ್ರಾಮೀಣ ಪ್ರದೇಶದಲ್ಲಿ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗು ವಿಶ್ವವಿದ್ಯಾಲಯ ಸ್ಥಳೀಯರಿಗಾಗಿ ಸಂಜೆ ಕಾಲೇಜು ಆರಂಭಿಸುವ ಮೂಲಕ ಸುವರ್ಣ ಅವಕಾಶವೊಂದನ್ನು ಒದಗಿಸಿಕೊಡುತ್ತಿದೆ.

ಸ್ಥಳೀಯವಾಗಿಯೇ ಸ್ವತಂತ್ರ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆಯುವ ಜಿಲ್ಲೆಯ ಜನತೆಯ ಕನಸಿಗೆ ಪೂರಕವಾಗಿ ಕುಶಾಲನಗರ ತಾಲೂಕು ಚಿಕ್ಕ ಅಳುವಾರದಲ್ಲಿ ಆರಂಭವಾಗಿರುವ ಕೊಡಗು ವಿಶ್ವವಿದ್ಯಾಲಯ ಅಧಿಕೃತವಾಗಿ ಚಟುವಟಿಕೆ ಶುರುಮಾಡಿ ಈಗಷ್ಟೇ ವರ್ಷ ತುಂಬತ್ತಿದೆ. ಆಗಲೇ ಹಲವು ಕ್ರಾಂತಿಕಾರಿ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗಿದ್ದು ಕೊಡಗು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ.
ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ ೨೦೦೦ಕ್ಕೆ ತಿದ್ದುಪಡಿ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ೭ ನೂತನ ವಿಶ್ವವಿದ್ಯಾಲಯಗಳ ಪೈಕಿ ಕೊಡಗು ವಿಶ್ವವಿದ್ಯಾಲಯ ಕೂಡ ಒಂದು. ಚಿಕ್ಕ ಅಳುವಾರದಲ್ಲಿ ಇರುವ ಮಂಗಳೂರು ವಿವಿ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಕೊಡಗು ವಿಶ್ವವಿದ್ಯಾಲಯ ಕಾರ್ಯಾಚರಣೆ ನಡೆಸುತ್ತಿದೆ. ದೂರದ ಊರುಗಳಿಗೆ ಹೋಗಿ ಪೋ?ಕರಿಂದ ದೂರ ಉಳಿದುಕೊಂಡು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಬಹು ಹತ್ತಿರದಲ್ಲೇ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾಲಯ ಅಧೀನದಲ್ಲಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರವನ್ನು ೯ ವ?ರ್ಗಳ ಹಿಂದೆ ಆರಂಭಿಸಲಾಗಿತ್ತು.

ಇಲ್ಲಿ ಈಗ ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ, ಯೋಗವಿಜ್ಞಾನ ವಿಭಾಗಗಳು, ವಾಣಿಜ್ಯಶಾಸ್ತ್ರ, ಸಮಾಜಕಾರ್ಯ, ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಗಣಕವಿಜ್ಞಾನ, ಕೊಡವ ಪ್ರೋಗ್ರಾಂಗಳು ಹಾಗೂ ಡಿಪ್ಲಮೋ ಸರ್ಟಿಫಿಕೇಟ್ ಕೋರ್ಸ್, ಡಿಪ್ಲಮೋ ಇನ್ ಯೋಗಿಕ್ ಸೈನ್ಸ್ ವಿ?ಯಗಳು ಕಾರ್ಯನಿರ್ವಹಿಸುತ್ತಿವೆ. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಜೀವರಸಾಯನ ಶಾಸ್ತ್ರ ಮತ್ತು ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗಗಳಲ್ಲಿ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿದೆ. ಅಂತರಾರಾಷ್ಟ್ರೀಯ ಸಂಶೋಧನಾ ವಿದ್ಯಾರ್ಥಿಗಳು ಕೂಡ ಪ್ರಸ್ತುತ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಎಚ್‌ಡಿ ಮಹಾಪ್ರಬಂಧಗಳನ್ನು ಸಲ್ಲಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಹಾಗೆಯೇ ವಿವಿಧ ವಿಭಾಗದ ಪ್ರಾಧ್ಯಾಪಕರುಗಳು ಯುಜಿಸಿ ಮತ್ತು ಇನ್ನಿತರ ಸಂಸ್ಥೆಗಳಿಂದ ಅನುದಾನ ಪಡೆದುಕೊಂಡು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.

ಇದೀಗ ಕೊಡಗಿನಲ್ಲಿ ಪ್ರಥಮ ಬಾರಿಗೆ ಸಂಜೆ ಕಾಲೇಜು ಆರಂಭಿಸಲು ಹೊರಟಿರುವ ಕೊಡಗು ವಿವಿ ನಿರ್ಧಾರ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಎಂದೇ ಗುರುತಿಸಲಾಗುತ್ತಿದೆ. ಜಿಲ್ಲೆಯ ಶೈಕ್ಷಣಿಕ ರಾಜಧಾನಿಯಾಗಿ ಬೆಳೆಯುತ್ತಿರುವ ಕುಶಾಲನಗರದಲ್ಲಿ ಸಂಜೆ ಕಾಲೇಜು ಆರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಪ್ರಾಯೋಗಿಕವಾಗಿ ಬಿ.ಎ. ಮತ್ತು ಬಿಕಾಂ ತರಗತಿಗಳು ಆರಂಭವಾಗಲಿದೆ. ಸಂಜೆ ೪.೩೦ರಿಂದ ೭.೩೦ರ ತನಕ ಕಾಲೇಜಿನ ಸಮಯ ನಿಗದಿಯಾಗಿದ್ದು ಇದರಲ್ಲಿ ಕೆಲವು ಬದಲಾವಣೆಗಳೂ ಆಗಬಹುದು.
ಆರಂಭದಲ್ಲಿ ಪದವಿ ತರಗತಿಗಳು ಮಾತ್ರ ಇರಲಿದೆ. ಇದಕ್ಕೆ ಸಿಗುವ ಪ್ರತಿಕ್ರಿಯೆ ಗಮನಿಸಿ ಭವಿಷ್ಯದಲ್ಲಿ ಸ್ನಾತಕೋತ್ತರ ಸೇರಿದಂತೆ ವಿವಿಧ ಆಕರ್ಷಕ ಕೋರ್ಸ್‌ಗಳನ್ನೂ ಆರಂಭಿಸುವ ಬಗ್ಗೆ ಕೊಡಗು ವಿವಿ ಚಿಂತನೆ ನಡೆಸಿದೆ.

೨೦೧೪ರ ಜನವರಿಯಲ್ಲಿ ಚಿಕ್ಕ ಅಳುವಾರದಲ್ಲಿ ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರ ಆರಂಭವಾಯಿತು. ೨೦೧೪ರ ಆಗಸ್ಟ್‌ನಲ್ಲಿ ಎಂಕಾಂ, ಎಂಎಸ್‌ಡಬ್ಲ್ಯು ೨೦೧೫ರಲ್ಲಿ ಎಂಎ ಕನ್ನಡ, ಎಂಎ ಇತಿಹಾಸ ಎಂಎ ರಾಜಕೀಯ ಶಾಸ್ತ್ರ, ೨೦೧೭ರ ಆಗಸ್ಟ್‌ನಲ್ಲಿ ಎಂಎಸ್‌ಸಿ ಸಸ್ಯಶಾಸ್ತ್ರ ಎಂಎಸ್‌ಸಿ ರಸಾಯನಶಾಸ್ತ್ರ ಎಂಎಸ್‌ಸಿ ಕಂಪ್ಯೂಟರ್ ಸೈನ್ಸ್ ಶುರುವಾಯಿತು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗು ವಿಶ್ವವಿದ್ಯಾಲಯ ಆರಂಭದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

ಕೊಡಗು ವಿಶ್ವವಿದ್ಯಾಲಯ ಈ ವರ್ಷದಿಂದಲೇ ಪ್ರಾಯೋಗಿಕವಾಗಿ ಸಂಜೆ ಕಾಲೇಜು ಆರಂಭಿಸುತ್ತಿದೆ. ಮೊದಲಿಗೆ ಬಿ.ಎ. ಮತ್ತು ಬಿ.ಕಾಂ. ತರಗತಿಗಳು ಇರಲಿವೆ. ಪ್ರತಿಕ್ರಿಯೆಗಳನ್ನು ನೋಡಿಕೊಂಡು ಸ್ನಾತಕೋತ್ತರ ಸೇರಿದಂತೆ ಬೇರೆ ಬೇರೆ ಕೋರ್ಸ್‌ಗಳನ್ನೂ ಸಂಜೆ ಕಾಲೇಜಿನಲ್ಲಿ ಪರಿಚಯಿಸುವ ಚಿಂತನೆಯೂ ಇದೆ. ಈ ಮೂಲಕ ಉನ್ನತ ಶಿಕ್ಷಣವನ್ನು ಸ್ಥಳೀಯವಾಗಿ ಜನಸಾಮಾನ್ಯರ ಮತ್ತಷ್ಟು ಹತ್ತಿರ ತೆಗೆದುಕೊಂಡು ಹೋಗಲಾಗುತ್ತಿದೆ.
ಡಾ. ಸೀನಪ್ಪ, ಕುಲಸಚಿವ, ಕೊಡಗು ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net