1500 ಹೆಕ್ಟೇರ್​ನಲ್ಲಿ ಟೊಮ್ಯಾಟೊ ಬೆಳೆಯಲು ಸಿದ್ಧತೆ

tomato
Published on

ಕೋಲಾರ: ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯೆಂದೇ ಪರಿಗಣಿಸಿರುವ ಟೊಮ್ಯಾಟೊ ಬೆಳೆಯನ್ನು ಬೆಳೆಯಲು ರೈತರು ಮುಂದಾಗಿದ್ದು, ಜೂನ್​&ಜುಲೈನಲ್ಲಿ ಬೆಳೆ ಬರುವ ಹಾಗೇ ಈಗಲೇ ನಾಟಿ ಮಾಡಲು ಶುರು ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 1,500 ಹೆಚ್ಚು ಹೆಕ್ಟೇರ್​ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲು ರೈತರು ಸಿದ್ಧತೆ ನಡೆಸಿದ್ದಾರೆ. ಪ್ರತಿವರ್ಷ ಜೂನ್​&ಜುಲೈನಲ್ಲಿ ಟೊಮ್ಯಾಟೊ ಸುಗ್ಗಿ, ಈ ಎರಡೂ ತಿಂಗಳಿನಲ್ಲಿ ಉತ್ತಮ ಬೆಲೆ ಸಿಗುತ್ತದೆ. ಕೋಲಾರ ಮಾರುಕಟ್ಟೆಯಿಂದ ಹೊರ ರಾಜ್ಯ ಮತ್ತು ಹೊರ ದೇಶಗಳಿಗೂ ಕೋಲಾರ ಮಾರುಕಟ್ಟೆಯಿಂದ ಟೊಮ್ಯಾಟೊ ರಫ್ತಾಗುತ್ತಿರುವುದು ವಿಶೇಷ.

ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಟೊಮ್ಯಾಟೊ ಹೆಚ್ಚಾಗಿ ಬೆಳೆಯುತ್ತಾರೆ. ಮಾರ್ಚ್​, ಏಪ್ರಿಲ್​, ಮೇ ತಿಂಗಳಿನಲ್ಲಿ ಹೊರ ರಾಜ್ಯಗಳಲ್ಲಿ ಉಷ್ಣಾಂಶ ಹೆಚ್ಚಾಗಿರುವ ಕಾರಣ ಈ ರಾಜ್ಯಗಳಲ್ಲಿ ಟೊಮ್ಯಾಟೊ ಫಸಲು ಇಳಿಮುಖವಾಗುತ್ತದೆ. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಟೊಮೆಟೊ ಬೆಳೆಯಲು ಉತ್ತಮ ವಾತಾವರಣ ಇರುತ್ತದೆ. ಆದ್ದರಿಂದ ಕೋಲಾರ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗುತ್ತದೆ.

ಪ್ರತಿವರ್ಷ ಜಿಲ್ಲೆಯಲ್ಲಿ ಜೂನ್​ ಮತ್ತು ಜುಲೈಗೆ ಫಸಲು ಬರುವಂತೆ ಮಾರ್ಚ್​ 2ನೇ ವಾರದಿಂದ ಮೇ 20ರ ತನಕ ನಾಟಿ ಮಾಡುತ್ತಾರೆ. ಜೂನ್​ನಲ್ಲಿ ಫಸಲು ಪ್ರಾರಂಭವಾಗಿ ಜುಲೈ ಮತ್ತು ಆಗಸ್ಟ್​ ವರೆಗೆ ಉತ್ತಮ ಬೆಲೆ ಇರುತ್ತದೆ ಎಂದು ಸಾವಿರಾರು ಹೆಕ್ಟೇರ್​ ಪ್ರದೇಶದಲ್ಲಿ ಎಕರೆಗೆ 3&4ಲಕ್ಷ ರೂ.ಖರ್ಚು ಮಾಡಿ ಬೆಳೆ ಮಾಡಲಾಗುತ್ತಿದೆ.

ಡ್ರಿಪ್​ ಮಲ್ಚಿಂಗ್​ ಪೇಪರ್​ಗೆ ಡಿಮಾಂಡ್​

ಈಗ ಟೊಮ್ಯಾಟೊ ಸಸಿ ನಾಟಿ ಮಾಡುವ ಸುಗ್ಗಿಯಾಗಿರುವ ಕಾರಣ ಡ್ರಿಪ್​ ಪೈಪ್​ ಮತ್ತು ಮಲ್ಚಿಂಗ್​ ಪೇಪರ್​ ಹಾಗೂ ಗೊಬ್ಬರ ಮತ್ತು ಔಷಧಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಂಗಡಿಗಳವರು ತಮಗೆ ಇಷ್ಟ ಬಂದಂತೆ ಡಿಮಾಂಡ್​ ನೋಡಿಕೊಂಡು ಬೆಲೆ ಹೆಚ್ಚಿಸುವ ಪ್ರವೃತ್ತಿ ಆರಂಭಿಸಿದ್ದಾರೆ. ಮಲ್ಚಿಂಗ್​ ಪೇಪರ್​ ಭೂಮಿಗೆ ಅಳವಡಿಸುತ್ತಾರೆ. ಹನಿ ನೀರಾವರಿಗಾಗಿ ಡ್ರಿಪ್​ ಪೈಪ್​ ಬಳಸುತ್ತಾರೆ. ಇವುಗಳ ಬೆಲೆ ಗಗನಕ್ಕೇರಿದೆ. ಒಂದು ತಿಂಗಳ ನಂತರ ಗಿಡ ದೊಡ್ಡದಾದ ಮೇಲೆ ಬಳಸುವ ಕಡ್ಡಿಯ ಬೆಲೆಯೂ ಹೆಚ್ಚಳವಾಗುವ ಎಲ್ಲ ಸಾಧ್ಯತೆ ಇದೆ. 8 ಅಡಿ ಉದ್ದದ ಕಡ್ಡಿ 35&40 ರೂ.ಗೆ ಮಾರಾಟವಾಗುತ್ತಿದೆ. ಒಂದು ನಾರಿಗೆ 1.50 ರೂ.ನಿಂದ 2 ರೂ.ಗೆ ಖರೀದಿಸಲಾಗುತ್ತಿದೆ.

ಜಿಲ್ಲೆಯಲ್ಲಿ 1,500ರಿಂದ 2,000 ಹೆಕ್ಟೇರ್​ನಲ್ಲಿ ಟೊಮ್ಯಾಟೊ ನಾಟಿಗೆ ಸಿದ್ಧತೆ ನಡೆದಿದೆ. ಉಷ್ಣಾಂಶ ಹೆಚ್ಚಾಗಿರುವ ಕಾರಣ ನಾಟಿ ಮಾಡಿದ ಸಸಿಗಳನ್ನು ಕಾಪಾಡಿಕೊಳ್ಳಬೇಕಿದೆ. ರೋಗ ರುಜಿನಗಳು ಬಾರದಂತೆ ಸಕಾಲಕ್ಕೆ ಔಷಧ ಸಿಂಪಡಣೆ ಮಾಡಿಕೊಂಡು ಕೊಟ್ಟಿಗೆ ಗೊಬ್ಬರದ ಜತೆಗೆ ರಾಸಾಯನಿಕ ಗೊಬ್ಬರ ನೀಡಬೇಕಾಗಿದೆ. ಕಳಪೆ ಬಿತ್ತನೆ ಬೀಜಕ್ಕೆ ಮತ್ತು ಕಳಪೆ ಸಸಿಗಳ ವಿತರಣೆ ಬಗ್ಗೆ ರೈತರು ಜಾಗೃತವಹಿಸಬೇಕು. ಅದಕ್ಕಾಗಿ ಇಲಾಖೆಯಿಂದ ಪ್ರತ್ಯೇಕ ತಂಡ ರಚನೆ ಮಾಡಲು ಮುಂದಾಗಿದೆ. ಕಾರ್ಯಗತವಾದರೆ ಎಲ್ಲದಕ್ಕೂ ಕಡಿವಾಣ ಬೀಳುತ್ತದೆ.

 -ಕುಮಾರಸ್ವಾಮಿ

ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಕೋಲಾರ

ರೈತರು ಒಂದೇ ಬೆಳೆ ನಂಬಿ ಲಕ್ಷಾಂತರ ರೂ. ಬಂಡವಾಳ ಹಾಕಿ ಟೊಮ್ಯಾಟೊ ಬೆಳೆಯಲು ಮುಂದಾಗಿದ್ದಾರೆ. ಇದು ವರ್ಷಕ್ಕೆ ಒಂದು ಅಥವಾ 2 ಸುಗ್ಗಿ ಬರುತ್ತವೆ. ಈ ಸುಗ್ಗಿಯಲ್ಲಿ ಉತ್ತಮ ಬೆಲೆ ಸುಗುತ್ತದೆಂಬುದು ರೈತರ ನಂಬಿಕೆ. ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಆದರೂ ಸಹ ರೈತರು ಬೆಳೆ ಮಾಡಲು ಮುಂದಾಗಿದ್ದಾರೆ. ಪ್ರತಿವರ್ಷ ವೈರಸ್​ ಕಾಟ ತಪ್ಪಿದ್ದಲ್ಲ. ಉಷ್ಣಾಂಶ ಹೀಗೆ ಮುಂದುವರಿದರೆ ವೈರಸ್​ ಕಾಟದಿಂದ ತಪ್ಪಿಸಿಕೊಳ್ಳಬಹುದು.

-ತೆರ್ನಹಳ್ಳಿ ಮಂಜು, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net