

ತುಮಕೂರು: ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿಯೂ ಕರೊನಾ ಲಸಿಕೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾಕೆ.ರಾಕೇಶ್‌ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲಿ ಜಿಲ್ಲೆಯಲ್ಲೂ ಕರೊನಾ ಲಸಿಕೆ ಲಭ್ಯವಾಗಲಿದ್ದು, ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ವೈದ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಹೆಲ್ತ್‌ಕೇರ್ ಕೆಲಸಗಾರರಿ ನೀಡಲಾಗುವುದು ಎಂದರು.
ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜ್ ಮಾತನಾಡಿ, ಜಿಲ್ಲೆಯ ಸರ್ಕಾರಿ, ಖಾಸಗಿ ನರ್ಸಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಹಾಗೂ ಫಾರ್ಮಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 19271 ಹೆಲ್ತ್ ಕೇರ್ ವರ್ಕರ್‌ಗಳನ್ನು ಕರೊನಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಲಸಿಕೆಯ ಶೇಖರಣೆ ಹಾಗೂ ವಿತರಣೆಗಾಗಿ ಜಿಲ್ಲೆಯ 134 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಕೋಲ್ಡ್ ಚೈನ್ ಪಾಯಿಂಟ್‌ಗಳಲ್ಲಿ ಪರಿಕರ ಸಿದ್ಧಪಡಿಸಿಕೊಳ್ಳಲಾಗಿದೆ ಎಂದರು.
ಲಸಿಕೆ ಶೇಖರಿಸಲು ಅಗತ್ಯವಿರುವ ಪರಿಕರಗಳ ಬಗ್ಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು, ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಲು ಹೆಚ್ಚುವರಿಯಾಗಿ ಪಶುಸಂಗೋಪನಾ ಇಲಾಖೆಯಲ್ಲಿರುವ 29 ಕೋಲ್ಡ್ ಚೈನ್ ಪಾಯಿಂಟ್‌ಗಳನ್ನು ಕಾಯ್ದಿರಿಸಲು ಪಶುವೈದ್ಯ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕರೊನಾ ಲಸಿಕೆ ನೀಡುವ ಬಗ್ಗೆ ಮುಂದಿನ 10 ದಿನಗಳೊಳಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ತರಬೇತಿ ನೀಡಬೇಕು, ಮೊದಲ ಹಂತದಲ್ಲಿ ಎಲ್ಲ ಹೆಲ್ತ್ ಕೇರ್ ವರ್ಕ್‌ರ್‌ಗಳು ತಪ್ಪದೇ ಲಸಿಕೆ ಪಡೆಯಬೇಕು ಲಸಿಕೆಯನ್ನು ಮತದಾನದ ಮಾದರಿಯಲ್ಲಿ ನೀಡಬೇಕು. ಮತದಾನ ಲಸಿಕಾ ಬೂತ್‌ಗಳನ್ನು ಸ್ಥಾಪಿಸಿ ಪರಸ್ಪರ ಅಂತರ ಕಾಪಾಡಿಕೊಂಡು ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ 2 ವರ್ಷದ ಮಕ್ಕಳಿಗೆ ನೀಡಲಾಗುವ ಬಿಸಿಜಿ, ಪೆಂಟಾದಂತಹ ಲಸಿಕೆಗಳನ್ನು ತಪ್ಪದೇ ನೀಡಬೇಕು. ಜಿಲ್ಲೆಯಲ್ಲಿ ಶೇ.100 ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ಮಧುಗಿರಿ ತಾಲೂಕಿನಲ್ಲಿ ಲಸಿಕೆ ನೀಡಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿವೆ 382 ಸಕ್ರಿಯ ಪ್ರಕರಣ: ತುಮಕೂರು ಜಿಲ್ಲೆಯಲ್ಲಿ ಶನಿವಾರ 28 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 22866ಕ್ಕೇರಿದೆ. 42 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 22044 ಜನರು ಸೋಂಕಿನಿಂದ ಗುಣಮುಖರಾದಂತಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 382ಕ್ಕಿಳಿದಿದೆ. ಚಿಕ್ಕನಾಯಕನಹಳ್ಳಿ, ಪಾವಗಡ ತಾಲೂಕಿನಲ್ಲಿ ತಲಾ 1, ಶಿರಾ, ತುರುವೇಕೆರೆ ತಲಾ 2, ಗುಬ್ಬಿ, ಕೊರಟಗೆರೆ ತಲಾ 3, ಮಧುಗಿರಿ 4, ತುಮಕೂರು 5 ಹಾಗೂ ತಿಪಟೂರು ತಾಲೂಕಿನಲ್ಲಿ 7 ಒಟ್ಟು 28 ಜನರಿಗೆ ಸೋಂಕು ತಗುಲಿದೆ.