

ಮಡಿಕೇರಿ: ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಯುವಜನರು ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕಾದರೆ ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಶಿವಕುಮಾರ್ ಸಲಹೆ ನೀಡಿದರು.
ಕೆಎಎಸ್ ಮತ್ತು ಐಎಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ನಗರದ ಬ್ಲಾಸಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯ ತಯಾರಿ ಮುಖ್ಯ. ಆ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಿಕೊಳ್ಳುವುದು, ಹಿಂದಿನ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮಾಡುವುದು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದು, ವಿಜ್ಞಾನ, ಸಮಾಜ ಕಾರ್ಯ.. ಹೀಗೆ ಪ್ರತಿಯೊಂದು ವಿಷಯದಲ್ಲಿ ಹಿಡಿತವಿದ್ದಲ್ಲಿ ಯಶಸ್ಸು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಆಹಾರ ಇಲಾಖೆಯ ಉಪ ನಿರ್ದೇಶಕ ಗೌರವ್‌ಕುಮಾರ್ ಶೆಟ್ಟಿ ಮಾತನಾಡಿ, ಯಾವುದೇ ಪರೀಕ್ಷೆ ಎದುರಿಸಬೇಕಾದರೆ ಆಸಕ್ತಿ ಜತೆಗೆ ನಿರಂತರ ಅಭ್ಯಾಸ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧಿಸಿದಂತೆ ಅಗತ್ಯ ಪುಸ್ತಕಗಳನ್ನು ಸಂಗ್ರಹಿಸಿ ಓದಬೇಕು ಎಂದು ಹೇಳಿದರು.
ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಜ.15ರವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದರು. ತರಬೇತಿ ಕಾರ್ಯಕ್ರಮದಲ್ಲಿ ಬ್ಲಾಸಂ ಶಾಲೆಯ ಪ್ರಾಂಶುಪಾಲೆ ಅನಸೂಯ ಇತರರು ಇದ್ದರು.