

ಗದಗ: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿಯ ಆ. 15ರಂದು ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವವನ್ನು ಅವಳಿ ನಗರದಲ್ಲಿ ವಿಶಿಷ್ಟ ಹಾಗೂ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಗದಗ - ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಪೂರ್ವ ಯೋಜನೆ, ಪೂರ್ಣ ಯೋಜನೆ ಹಾಗೂ ಯಶಸ್ವಿ ಯೋಜನೆಯ ಸೂತ್ರದಡಿ ತಯಾರಿ ಮಾಡಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ನಿರ್ದೇಶಿಸಿದರು.
ಗದಗ -ಬೆಟಗೇರಿ ಅವಳಿ ನಗರದಲ್ಲಿರುವ ಪ್ರತಿ ವೃತ್ತಗಳನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಅಲ್ಲದೆ, ನಗರಸಭೆ ಕಟ್ಟಡ ಸೇರಿ ಮುನ್ಸಿಪಲ್ ಕಾಲೇಜು ಕಟ್ಟಡಕ್ಕೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಅಮೃತ ಮಹೋತ್ಸವ ಕುರಿತಂತೆ ಅವಳಿ ನಗರದಲ್ಲಿ ಸ್ವಾತಂತ್ರ್ಯ ಜಾಗೃತಿ ಮೂಡಿಸುವ ಗೋಡೆ ಬರಹಗಳನ್ನು ಬರೆಯಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಕರೆ ನೀಡಿರುವಂತೆ ಹರ್ ಘರ್ ತಿರಂಗಾ ಕಾರ್ಯಕ್ರಮದಡಿ ಆಗಸ್ಟ್ 13ರಿಂದ 15ರವರೆಗೆ ಅವಳಿ ನಗರದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಲು ಪ್ರೇರೇಪಿಸಬೇಕು. ಜತೆಗೆ ಪ್ರತಿಯೊಂದು ಮನೆ, ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಿ ರಾಷ್ಟ್ರಭಕ್ತಿ ಮೆರೆಯಬೇಕು. ಹರ್ ಘರ್ ತಿರಂಗಾ ಬಗ್ಗೆ ನಗರಸಭೆ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು. ಮನೆ ಮೇಲೆ ಧ್ವಜ ಹಾರಿಸುವ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಅಲ್ಲದೆ, ಧ್ವಜಾರೋಹಣ ಸಂದರ್ಭದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ಪೌರ ಕಾರ್ವಿುಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಮಾತನಾಡಿ, ನಗರಸಭೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಸಮನ್ವಯ ಸಾಧಿಸಿ ತಮಗೆ ನೀಡಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಈ ವೇಳೆ ವೇದಿಕೆ ನಿಮಾಣ, ಆಮಂತ್ರಣ ಪತ್ರಿಕೆ ಮುದ್ರಣ, ಊಟೋಪಹಾರ, ಪಾರಿತೋಷಕ ವಿತರಣೆ ಸೇರಿ ಹಲವು ವಿಷಯಗಳ ಕುರಿತು ರ್ಚಚಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಆಡಳಿತ ಪಕ್ಷದ ನಾಯಕ ವಿನಾಯಕ ಮಾನ್ವಿ, ಹೈಸ್ಕೂಲ್ ಸಮಿತಿ ಅಧ್ಯಕ್ಷ ಮಹಾಂತೇಶ ನಲವಡಿ, ಪೌರಾಯುಕ್ತ ರಮೇಶ ಸುಣಗಾರ ಸೇರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.