ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಭರದ ಸಿದ್ಧತೆ, ಸರ್ಕಾರದ ನಿಯಮ ಪಾಲನೆಗೆ ಸುತ್ತೋಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವ್ಯವಸ್ಥೆ

sslc exam
Published on
ಬೆಂಗಳೂರು ಗ್ರಾಮಾಂತರ: ಜೂ.25ರಿಂದ ಜುಲೈ 3ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಸಿದ್ಧತೆ ಆರಂಭಗೊಂಡಿದೆ.
 ಜಿಲ್ಲೆಯಲ್ಲಿ 13,252 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, 52 ಕೇಂದ್ರ ಗುರುತಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಕರೊನಾ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಸಿದ್ಧತೆ ನಡೆದಿದೆ.
ಯಾವುದಾದರೂ ತಾಲೂಕನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಿದರೆ ಆ ಭಾಗದ ವಿದ್ಯಾರ್ಥಿಗಳಿಗೆ ತಾಲೂಕು ಕೇಂದ್ರದಲ್ಲಿ ಪ್ರತ್ಯೇಕ ಕೇಂದ್ರ ತೆರೆಯಲು ಸಿದ್ಧತೆ ನಡೆದಿದೆ. ಜಿಲ್ಲೆಯಿಂದ ಸ್ವಗ್ರಾಮಗಳಿಗೆ ತೆರಳಿರುವ ವಲಸೆ ವಿದ್ಯಾರ್ಥಿಗಳ ಪಟ್ಟಿ ತಯಾರಿಸುತ್ತಿದ್ದು, ವಿದ್ಯಾರ್ಥಿಗಳ ಇಚ್ಚೆಯಂತೆ ಅವರು ಸ್ವಂತ ಸ್ಥಳಕ್ಕೆ ಹತ್ತಿರವಿರುವ ಕೇಂದ್ರದಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗಿದೆ.
 ಪ್ರತಿ ವಿದ್ಯಾರ್ಥಿ ಹಾಗೂ ಪರೀಕ್ಷಾ ಕರ್ತವ್ಯದಲ್ಲಿ ಭಾಗವಹಿಸುವವರಿಗೆ 2 ಮಾಸ್ಕ್, ಕೇಂದ್ರಕ್ಕೆ ಬರುವ ಮುನ್ನ ಸ್ಯಾನಿಟೈಸರ್ ಮತ್ತು ಪ್ರತಿ ಕೇಂದ್ರದಲ್ಲಿ ಹೆಲ್ತ್ ಸ್ಟೇಷನ್ ಸ್ಥಾಪನೆ ಮಾಡಲಾಗುತ್ತಿದೆ. ಪರೀಕ್ಷಾ ದಿನದಂದು ಬೆಳಗ್ಗೆ 8.30ಕ್ಕೆ ಆರೋಗ್ಯ ಇಲಾಖೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಉಸ್ತುವಾರಿಯಲ್ಲಿ ಥರ್ಮಲ್ ಸ್ಕಾೃನಿಂಗ್ ಮಾಡಲಾಗುವುದು.
 ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ ಪರಸ್ಪರ ಅಂತರ ಕಾಪಾಡುವ ನಿಟ್ಟಿನಲ್ಲಿ 1 ಡೆಸ್ಕ್‌ಗೆ ಇಬ್ಬರಂತೆ 3.5 ಅಡಿ ಅಂತರದಲ್ಲಿ ಗರಿಷ್ಠ 20 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
 ಪರೀಕ್ಷೆಗೆ ಹಾಜರಾಗುವ ಮುನ್ನ ಯಾವುದೇ ವಿದ್ಯಾರ್ಥಿಗೆ ಲಕ್ಷಣ ಕಂಡುಬಂದರೆ ಅಂಥ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೆಚ್ಚುವರಿ ಕೊಠಡಿ ಸಿದ್ಧಪಡಿಸಲಾಗಿದೆ. ಎನ್-95 ಮಾಸ್ಕ್ ಧರಿಸಿ, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದ್ದಾರೆ.
ರೂಟ್ ಮ್ಯಾಪ್ ರಚನೆ: ಪರೀಕ್ಷಾ ಕೇಂದ್ರಕ್ಕೆ ಬರಲು ಸಾರಿಗೆ ವ್ಯವಸ್ಥೆ ಇಲ್ಲದಿದ್ದಲ್ಲಿ ಪಾಲಕರನ್ನು ಸಂಪರ್ಕಿಸಿ ಖಾಸಗಿ ಶಾಲೆ ಸಹಯೋಗದಲ್ಲಿ ರೂಟ್‌ಮ್ಯಾಪ್ ರಚಿಸಿ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು.
ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ಹಾಗೂ ಉಪಾಹಾರ ತರುವಂತೆ ಇಲಾಖೆ ನಿರ್ದೇಶನ ನೀಡಿದೆ.
ಸೋಂಕು ನಿವಾರಕ ಸಿಂಪಡಣೆೆ: ಪರೀಕ್ಷೆ ಆರಂಭದ ಮುನ್ನಾ ದಿನದಂದು ಆಯಾ ಪಂಚಾಯಿತಿಗಳು ಕೇಂದ್ರಗಳಲ್ಲಿ ಸೋಂಕು ನಿವಾರಕ ಸಿಂಪಡಿಸಬೇಕು. ಪರೀಕ್ಷಾ ದಿನವೂ ಇದನ್ನು ಮುಂದುವರಿಸಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಆರಂಭವಾಗಿದೆ. ಕರೊನಾ ಹರಡದಂತೆ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯಬಹುದು. ಎಂ.ಎಚ್. ಗಂಗಮಾರೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೆಂ.ಗ್ರಾಮಾಂತರ ಪರೀಕ್ಷಾ ಅವಧಿಯಲ್ಲಿ ವಸತಿ ಸೌಕರ್ಯವಿಲ್ಲದ ವಿದ್ಯಾರ್ಥಿಗಳಿಗಾಗಿ ಹತ್ತಿರವಿರುವ ಸಮಾಜ ಕಲ್ಯಾಣ ಇಲಾಖೆ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ಶಾಲೆಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇರಲಿದೆ. ವಿದ್ಯಾರ್ಥಿ ಪಾಲಕರು ಈ ಬಗ್ಗೆ ಮೊದಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು.   ಕನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net